‘ಅತೃಪ್ತರಿಗೆ ವಿಪ್ ಅನ್ವಯಿಸಲ್ಲ’ : ಹಿರಿಯ ವಕೀಲ ಮುಕುಲ್ ರೋಹ್ಟಗಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.23- ರಾಜೀನಾಮೆ ನೀಡಿರುವ ಶಾಸಕರು ಕಲಾಪಕ್ಕೆ ಗೈರು ಹಾಜರಾದರೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವುದಾಗಲೀ, ಇಲ್ಲವೇ ವಿಪ್ ಜಾರಿ ಮಾಡದಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ. ಇದರಿಂದಾಗಿ ರಾಜೀನಾಮೆ ನೀಡಿರುವ ಶಾಸಕರಿಗೆ ಮತ್ತೊಂದು ಜೀವದಾನ ಸಿಕ್ಕಂತಾಗಿದ್ದು, ಅನರ್ಹತೆಯಿಂದ ತಾತ್ಕಾಲಿಕವಾಗಿ ಪಾರಾಗುವ ಸಾಧ್ಯತೆ ಇದೆ.

ಸುಪ್ರೀಂಕೋರ್ಟ್‍ನಲ್ಲಿಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಕುಲ್ ರೋಹ್ಟಗಿ ರಾಜೀನಾಮೆ ನೀಡಿರುವ ಶಾಸಕರನ್ನು ಸದನಕ್ಕೆ ಹಾಜರಾಗುವಂತೆ ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಕಲಾಪಕ್ಕೆ ಗೈರಾದರೆ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸದಸ್ಯತ್ವವನ್ನು ಅನರ್ಹಗೊಳಿಸುವುದಾಗಲಿ, ಇಲ್ಲವೆ ವಿಪ್ ಜಾರಿ ಮಾಡುವಂತಿಲ್ಲ ನ್ಯಾಯಾಲಯವೇ ರಕ್ಷಣೆ ನೀಡಿದೆ. ಹಾಗಾಗಿ ಸ್ಪೀಕರ್ ಅವರ ವಿಚಾರಣೆಗೆ ಅವರು ಹಾಜರಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕಳೆದ ಬಾರಿ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಲ್ಲಿ ರಾಜೀನಾಮೆ ನೀಡಿರುವ ಶಾಸಕರಿಗೆ ಕಲಾಪದಲ್ಲಿ ಭಾಗವಹಿಸುವಂತೆ ಒತ್ತಡ ಹಾಕಬಾರದು. ಹಾಜರಾಗುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅಲ್ಲದೆ, ಅವರಿಗೆ ವಿಪ್ ಜಾರಿ ಮಾಡಬಾರದೆಂದು ತ್ರಿಸದಸ್ಯ ಪೀಠ ನಿರ್ದೇಶನ ನೀಡಿದ್ದಾಗಿ ರೋಹ್ಟಗಿ ವಿವರಿಸಿದರು.

ಶಾಸಕರಾದ ಗೋಪಾಲಯ್ಯ, ನಾರಾಯಣಗೌಡ, ಎಚ್.ವಿಶ್ವನಾಥ್, ಮುನಿರತ್ನ, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಸುಧಾಕರ್, ಎಂ.ಟಿ.ಬಿ.ನಾಗರಾಜ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಆನಂದ್‍ಸಿಂಗ್, ರೋಷನ್‍ಬೇಗ್, ರಮೇಶ್‍ಜಾರಕಿ ಹೊಳಿ ಅವರುಗಳು ರಾಜೀನಾಮೆ ನೀಡಿದ್ದಾರೆ.

ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಇವರು ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರ ಪ್ರಕಾರ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ವಿಧಾನಸಭೆ ಸ್ಪೀಕರ್‍ಗೆ ದೂರು ನೀಡಿದ್ದಾರೆ. ಚೆಂಡು ಈಗ ಸ್ಪೀಕರ್ ಅಂಗಳದಲ್ಲಿದೆ.

Facebook Comments