ಬೆಂಗ್ಳೂರಲ್ಲಿರುವ ಬಹು ಮಹಡಿ ಕಟ್ಟಡಗಳಿಗೆ ಶುರುವಾಯ್ತು ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಬಹು ಮಹಡಿ ಕಟ್ಟಡಗಳ ಮಾಲೀಕರಿಗೆ ನಡುಕ ಶುರುವಾಗಿದೆ.
ಬಿಬಿಎಂಪಿ ಬರೋಬ್ಬರಿ 5 ಸಾವಿರ ಬಹುಮಹಡಿ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧಾರ ಮಾಡಿರುವುದರಿಂದ ಅಕ್ರಮವಾಗಿ ನಿರ್ಮಾಣ ಮಾಡಿರುವವರು ಈಗ ಆತಂಕಕ್ಕೆ ಈಡಾಗಿದ್ದಾರೆ.

ಕಟ್ಟಡಗಳು ಉರುಳಿ ಆಗುತ್ತಿರುವ ಅನಾಹುತ ಗಳನ್ನು ತಪ್ಪಿಸಲು ಮುಂದಾಗಿರುವ ಬಿಬಿಎಂಪಿ ಬರೋಬ್ಬರಿ ಸಾವಿರಾರು ಬಹುಮಹಡಿ ಕಟ್ಟಡ ಗಳನ್ನು ನೆಲಸಮಗೊಳಿಸಲು ಚಿಂತನೆ ನಡೆಸಿದೆ. ನಗರದಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ ಬಳಿಕ ಬಿಬಿಎಂಪಿ ಇಂತಹ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಗಾಳಿಗೆ ತೂರಿ ನಿರ್ಮಾಣ ಮಾಡಿರುವ ಕಟ್ಟಡಗಳು, ನಿರ್ಮಿಸಿರುವ ವರ್ಷ, ಕಟ್ಟಡಗಳ ಆಯಸ್ಸು, ಅವುಗಳ ಗುಣಮಟ್ಟ ಇನ್ನಿತರ ಮಾಹಿತಿ ಸಂಗ್ರಹಿ ಸುವಂತೆ ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ಬಿಬಿಎಂಪಿ ಮೌಖಿಕ ಸೂಚನೆ ನೀಡಿದೆ. ಇದರನ್ವಯ ಕಳಪೆ ಹಾಗೂ ಕಾನೂನು ಬಾಹಿರ ಸರಿಸುಮಾರು 5 ಸಾವಿರ ಕಟ್ಟಡಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಈ 5 ಸಾವಿರ ಕಟ್ಟಡಗಳಲ್ಲಿ ಸರ್ಕಾರಿ ಸ್ವಾಮ್ಯದ ಕಚೇರಿಗಳಿವೆ. ಖಾಸಗಿ ವ್ಯಕ್ತಿಗಳ ಇಂತಹ ಕಟ್ಟಡಗಳನ್ನು ನೆಲಸಮಗೊಳಿಸಿದಾಗ ಅಗತ್ಯ ಪರಿಹಾರ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಬಿಬಿಎಂಪಿಗೆ ಯಾವುದೇ ಮಾಹಿತಿ, ಆಸ್ತಿ ತೆರಿಗೆ ನೀಡದೆ ಮನೆ ನಿರ್ಮಾಣ ಮಾಡಿದವರಿಗೆ ಈಗ ಸಂಕಷ್ಟ ಎದುರಾಗಲಿದೆ.

ಪ್ರಸ್ತುತ ಬಿಬಿಎಂಪಿಯಿಂದ ಅನುಮತಿ ಪಡೆದು ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವವರ ಸಂಖ್ಯೆ ಕೇವಲ 1178 ಇದೆ. ಈ ಕಟ್ಟಡಗಳವರು ಸ್ವಾೀನ ಪ್ರಮಾಣ ಪತ್ರ ಪಡೆದಿದ್ದಾರೆ. ಉಳಿದ ಕಟ್ಟಡಗಳಿಗೆ ಸ್ವಾೀನ ಪ್ರಮಾಣ ಪತ್ರಗಳು ಇಲ್ಲ. ಇಷ್ಟು ಪ್ರಮಾಣದ ಕಟ್ಟಡಗಳು ನಗರದಲ್ಲಿ ತಲೆ ಎತ್ತಿವೆ. ಇದಕ್ಕೆ ಯಾರು ಹೊಣೆ? ನಿರಂತರ ಅನಾಹುತಗಳು ಮಹಾನಗರದಲ್ಲಿ ಜರುಗುತ್ತಿವೆ.

ಇದೇ ರೀತಿ ನಿರಂತರವಾಗಿ ಮಳೆಯಾಗುತ್ತಿದ್ದರೆ ಕಟ್ಟಡಗಳು ಕುಸಿಯುವುದಷ್ಟೇ ಅಲ್ಲದೆ ಪ್ರಾಣ ಹಾನಿಯಾದರೆ ಅದಕ್ಕೆ ಯಾರು ಹೊಣೆ? ಲಕ್ಕಸಂದ್ರ, ಆಡುಗೋಡಿ, ಶಂಕರ್‍ನಾಗ್ ಬಸ್ ನಿಲ್ದಾಣದಲ್ಲಿ ಈಗಾಗಲೇ ಹಲವು ಕಟ್ಟಡಗಳು ಕುಸಿದಿವೆ. ಈಗ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಿದೆ. ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಈಗಾಗಲೇ ಸರ್ವೆ ಕಾರ್ಯ ಮಾಡಿದೆ.

ಕೊರೊನಾ ಹಿನ್ನೆಲೆಯಲ್ಲಿ ತೆರವುಗೊಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಶಿಥಿಲಗೊಂಡಿರುವ ಕಟ್ಟಡಗಳನ್ನಾದರೂ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಾಕಷ್ಟು ಅನಾಹುತ ಎದುರಿಸಬೇಕಾಗುತ್ತದೆ.

Facebook Comments