ನಾಳೆ 74ನೇ ಸ್ವಾತಂತ್ರ್ಯ ದಿನಾಚರಣೆ, ದೇಶದಾದ್ಯಂತ ಹೈ ಅಲರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.14- ಕೊರೊನಾ ಆತಂಕದ ನಡುವೆಯೂ ನಾಳೆ ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಭೂತಪೂರ್ವ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಲವು ಭಯೋತ್ಪಾದಕ ಸಂಘಟನೆಗಳು ಹಾಗೂ ಸಮಾಜಘಾತುಕ ಶಕ್ತಿಗಳು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ವಿಭಾಗ ಎಚ್ಚರಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ದೆಹಲಿಯ ಕೆಂಪುಕೋಟೆ ಪ್ರದೇಶದಲ್ಲಿ 300 ಕ್ಯಾಮೆರಾಗಳು, 4 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಕ್ಕಿಂತ ಮುಖ್ಯವಾಗಿ ಕೊರೊನಾ ಹೆಮ್ಮಾರಿ ಇರುವ ಕಾರಣ ಮತ್ತಷ್ಟು ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಾಳಿನ ಸ್ವಾತಂತ್ರೋತ್ಸವಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದು, ಕವಾಯತು ಪಡೆಗಳು ಮಾಸ್ಕ್ ಧರಿಸಿಯೇ ಪೂರ್ವ ತಾಲೀಮು ನಡೆಸಿವೆ. ಸೇನಾ ಪಡೆಗಳು ನಾಳೆ ಗಾಳಿಯಲ್ಲಿ 21 ಸುತ್ತು ಗುಂಡು ಹಾರಿಸಿ, ಪ್ರಧಾನಿ ನರೇಂದ್ರಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಲಿವೆ.

ಬಳಿಕ ಪ್ರಧಾನಿ ಧ್ವಜಾರೋಹಣ ಮಾಡಲಿದ್ದು, ರಾಷ್ಟ್ರಗೀತೆ ಹಾಡಲಿದ್ದಾರೆ. ಬಳಿಕವಷ್ಟೇ ದೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಾರಿ ಕೊರೊನಾ ಇರುವ ಕಾರಣ ಕೊರೊನಾ, ಸ್ವಚ್ಛತೆ, ಸೇನಾಪಡೆಗಳ ಬಲವರ್ಧನೆ, ರಾಮಮಂದಿರ ಕುರಿತಂತೆಯೇ ಹೆಚ್ಚಿನ ಮಾತು ಇರಲಿದೆ ಎಂದು ಹೇಳಲಾಗುತ್ತಿದೆ.

ಕೆಂಪುಕೋಟೆ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಯ್ದ ಕೆಲವರಿಗಷ್ಟೇ ಆಹ್ವಾನ ನೀಡಲಾಗಿದೆ. ಕೇವಲ ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ನರ್ಸ್‍ಗಳು ಹಾಗೂ ಕೊರೊನಾ ಗೆದ್ದ ಕೆಲವು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ. ಇವರೆಲ್ಲರೂ ಪಿಪಿಇ ಕಿಟ್ ಧರಿಸಿರುತ್ತಾರೆ.

ದೇಶದಲ್ಲಿ ಕೋವಿಡ್ ಮಾರಿ ಇರುವುದರಿಂದ ಶಾಲಾ ಮಕ್ಕಳ ಸಾಂಸ್ಕøತಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿದೆ. ರೆಡ್‍ ಫೋರ್ಟ್‍ನ ಎರಡು ಕಡೆಯ ಮೈದಾನಗಳು ಮುಚ್ಚಲ್ಪಟ್ಟಿರುತ್ತವೆ. ಕೇವಲ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗಬಹುದು. ಇವರೆಲ್ಲರಿಗೂ ಮಾಸ್ಕ್ ಧರಿಸೋದು ಕಡ್ಡಾಯಗೊಳಿಸಲಾಗಿದೆ.

# ರಾಜ್ಯದಲ್ಲೂ ವಿಭಿನ್ನ ಸ್ವಾತಂತ್ರ್ಯೋತ್ಸವ:
ರಾಜ್ಯದಲ್ಲೂ ಕೂಡ ಕೊರೊನಾ ಮಾರ್ಗಸೂಚಿ ಅನುಸಾರವೇ ಸ್ವಾತಂತ್ಯ ದಿನಾಚರಣೆ ನಡೆಯಲಿದೆ. ಕೇಂದ್ರ ಸರ್ಕಾರದ ಆದೇಶದಂತೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಾರ್ವಜನಿಕ ಪ್ರವೇಶವಿರುವುದಿಲ್ಲ. ಹೆಚ್ಚು ಜನರು ಒಂದೆಡೆ ಸೇರಲು ಅವಕಾವಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಡಿಸಿಪಿ ಸಿ.ಆರ್. ಗಿರೀಶ್ ಪೆರೇಡ್ ನೇತೃತ್ವ ವಹಿಸಲಿದ್ದು, ಪೆರೇಡ್ ನಲ್ಲಿ ಟ್ರಾಫಿಕ್ ಪೊಲೀಸ್, ಕೆಎಸ್‍ಆರ್‍ಪಿ, ಬಿ.ಎಸ್.ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾಡ್ರ್ಸ್, ಸೇರಿದಂತೆ 16 ತುಕಡಿಗಳಲ್ಲಿ 350 ಮಂದಿ ಭಾಗವಹಿಸುತ್ತಾರೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್‍ಪಂಥ್ ಹೇಳಿದ್ದಾರೆ.

ಒಂಭತ್ತು ಮಂದಿ ಡಿಸಿಪಿ ಸೇರಿದಂತೆ 680 ಜನ ಭದ್ರತಾ ಕೆಲಸದಲ್ಲಿ ತೊಡಗಿರುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಇಲಾಖೆಯ ಕೋವಿಡ್ ವಾರಿಯರ್ಸ್ 100 ಸಿಬ್ಬಂದಿ, ಕೋವಿಡ್‍ನಿಂದ ಗುಣಮುಖರಾದ ಎಲ್ಲಾ ವಯೋಮಾನದ 25 25 ಜನರನ್ನು ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನ ಹಾಗೂ ವೆಬ್ ಕ್ಯಾಸ್ಟ್ ಮೂಲಕ ಪ್ರಸಾರ ಮಾಡಲಾಗುತ್ತಿದೆ.

Facebook Comments

Sri Raghav

Admin