ರೈಲ್ವೆ ನಿಲ್ದಾಣದಲ್ಲಿ ಮುಂಬೈನಿಂದ ಬಂದಿಳಿದ ಪ್ರಯಾಣಿಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ… ಕಳೆದ 14 ಗಂಟೆಗಳಿಂದ ಪ್ರಯಾಣ ಮಾಡಿ ಬಂದಿದ್ದೇವೆ. ಹಸಿವಾಗುತ್ತಿದೆ ಏನಾದರೂ ಕೊಡಿ, ಇಲ್ಲ ನಮ್ಮನ್ನು ಮನೆಗೆ ಹೋಗಲು ಬಿಡಿ.

ಇಲ್ಲದಿದ್ದರೆ ಕ್ವಾರಂಟೈನ್ ಸೆಂಟರ್‍ಗಾದರೂ ಕಳುಹಿಸಿಕೊಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದುದು ಒಂದೆಡೆಯಾದರೆ, ಮತ್ತೊಂದೆಡೆ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಮುಂಬೈನಿಂದ ಬಂದಿಳಿದ ಪ್ರಯಾಣಿಕರನ್ನು ತಪಾಸಣೆ ಮಾಡಿ ವಿವರಗಳನ್ನು ಪಡೆದು ಕ್ವಾರಂಟೈನ್ ಸೆಂಟರ್‍ಗೆ ಕಳುಹಿಸಿದರು.

ಮಕ್ಕಳು, ವೃದ್ಧರು ಹಾಗೂ ಸೋಂಕಿನ ಲಕ್ಷಣಗಳಿರುವವರನ್ನು ಮೊದಲು ತಪಾಸಣೆ ಮಾಡಿ ಅಧಿಕಾರಿಗಳು ಆದ್ಯತೆ ಮೇರೆಗೆ ಅವರನ್ನು ಕ್ವಾರಂಟೈನ್ ಸೆಂಟರ್‍ಗೆ ಕಳುಹಿಸಿಕೊಟ್ಟರು. ಮಹಾರಾಷ್ಟ್ರದ ಮುಂಬೈನಿಂದ ಬರೋಬ್ಬರಿ 1734 ಪ್ರಯಾಣಿಕರನ್ನು ಹೊತ್ತ ಉದ್ಯಾನ ಎಕ್ಸ್‍ಪ್ರೆಸ್ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ನಿಂತಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳು ಒಂದೊಂದೇ ಬೋಗಿಯ ಪ್ರಯಾಣಿಕರನ್ನು ಇಳಿಸಿ ಅವರ ಎಲ್ಲ ವಿವರಗಳನ್ನೂ ಪಡೆದು ತಪಾಸಣೆ ನಡೆಸಿದರು.

ಹಣ ಉಳ್ಳವರನ್ನು ಹೊಟೇಲ್ ಕ್ವಾರಂಟೈನ್ ಮಾಡಿದರೆ, ಉಳಿದವರಿಗೆ ಹಾಸ್ಟೆಲ್, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ವ್ಯವಸ್ಥೆ ಮಾಡಿದ್ದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಯಿತು.

ಈ ನಡುವೆ ಮಹಾರಾಷ್ಟ್ರದಿಂದ ಬಂದವರಲ್ಲದೆ ಮಧ್ಯೆ ರೈಲು ಹತ್ತಿಕೊಂಡಿದ್ದ ಹಲವರು ಕಿರಿಕ್ ಶುರು ಮಾಡಿದರು. ನಾವು ಮುಂಬೈನಿಂದ ಬಂದಿಲ್ಲ, ನಮಗೆ ಯಾವುದೇ ಸೋಂಕಿಲ್ಲ. ನಮ್ಮನ್ನು ಕ್ವಾರಂಟೈನ್ ಮಾಡುವ ಅಗತ್ಯವಿಲ್ಲ ಎಂದು ರಗಳೆ ತೆಗೆದರು. ಅದರಲ್ಲಿ ಐವರು ಪರಾರಿ ಕೂಡ ಆದರು ಎಂದು ತಿಳಿದುಬಂದಿದೆ.

ಪ್ರತಿ ಬೋಗಿಯಿಂದ ಪ್ರಯಾಣಿಕರನ್ನು ಕರೆತಂದು ಆರೋಗ್ಯಾಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದು ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲು ಹರಸಾಹಸ ಪಡಬೇಕಾಯಿತು. ರೈಲ್ವೆ ನಿಲ್ದಾಣದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಂತರ ಸೋಂಕಿನ ಲಕ್ಷಣ ಕಂಡುಬಂದವರ ಗಂಟಲು ದ್ರವದ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಯಿತು. ಇದಕ್ಕಾಗಿ 10 ಕೌಂಟರ್‍ಗಳನ್ನು ಮಾಡಲಾಗಿತ್ತು.

ಮುಂಬೈನಿಂದ ಬಂದವರಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಸೋಂಕಿನ ಲಕ್ಷಣ ಕಂಡುಬಂದವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಎರಡು ದಿನಗಳಲ್ಲಿ ಅವರ ವರದಿ ಬರುತ್ತದೆ. ವರದಿ ನೆಗೆಟಿವ್ ಬಂದರೆ ಕ್ವಾರಂಟೈನ್ ಅವಧಿ ಮುಗಿದ ನಂತರ ಎಲ್ಲರನ್ನೂ ಮನೆಗೆ ಕಳುಹಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಆರೋಗ್ಯಾಧಿಕಾರಿ ಶಿವಕುಮಾರ್ ಮಾತನಾಡಿ, ಸೋಂಕಿನ ಲಕ್ಷಣ ಕಂಡುಬಂದಿರುವ 200ಕ್ಕೂ ಹೆಚ್ಚು ಜನರಿಗೆ ರೈಲ್ವೆ ನಿಲ್ದಾಣದಲ್ಲೇ ಟೆಸ್ಟ್ ಮಾಡಲಾಗಿದೆ. ಇವರ ವರದಿ ಎರಡು ದಿನಗಳಲ್ಲಿ ಬರಲಿದೆ. ಇಂದು ನಗರಕ್ಕೆ ಆಗಮಿಸಿರುವ ಎಲ್ಲರನ್ನೂ ಒಂದು ವಾರ ಕ್ವಾರಂಟೈನ್ ಮಾಡಲಾಗುವುದು. ಟೆಸ್ಟ್‍ಗೆ ಕಳುಹಿಸಿರುವವರಲ್ಲಿ ಪಾಸಿಟಿವ್ ಬಂದರೆ ಅವರನ್ನು ಐಸೊಲೇಷನ್‍ಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಮಾತನಾಡಿ, 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುವುದು. ಉಸಿರಾಟದ ತೊಂದರೆ ಮತ್ತು ತೀವ್ರ ಜ್ವರದ ಲಕ್ಷಣ ಕಂಡುಬಂದವರನ್ನು ನೇರವಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ರೈಲು ಬರುವ ಸೂಚನೆ ಮೊದಲೇ ಇತ್ತು. ಹೀಗಾಗಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆವು. 10 ಕೌಂಟರ್‍ಗಳಲ್ಲಿ ಎಲ್ಲ ಪ್ರಯಾಣಿಕರನ್ನೂ ತಪಾಸಣೆ ಮಾಡಲಾಗುತ್ತಿದೆ. ಸೋಂಕಿನ ಲಕ್ಷಣ ಇರುವವರನ್ನು ಪ್ರತ್ಯೇಕ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು. ಕ್ವಾರಂಟೈನ್‍ನಲ್ಲಿರುವವರ ಮೇಲೆ ಅಧಿಕಾರಿಗಳು ನಿಗಾ ಇಡಲಿದ್ದಾರೆ ಎಂದು ಅವರು ಹೇಳಿದರು.

Facebook Comments