ಮಹಾಮಳೆಗೆ ಮುಂಬೈ ತತ್ತರ : ಅನೇಕ ಪ್ರದೇಶಗಳು ಜಲಾವೃತ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.23-ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಿನ್ನೆ ರಾತ್ರಿಯಿಡಿ ಸುರಿದ ಹಠಾತ್ ಮಹಾ ಮಳೆಯಿಂದ ಅನೇಕ ಪ್ರದೇಶಗಳು ಮತ್ತು ಸುತ್ತಮುತ್ತಲ ಸ್ಥಳಗಳು ಜಲಾವೃತವಾಗಿವೆ.  ಮುಂಬೈನ ಬಹುತೇಕ ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಸ್ಥಳೀಯ ರೈಲುಗಳು ಮತ್ತು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ರಸ್ತೆಗಳು ಕೆರೆಗಳಾಗಿ ಪರಿವರ್ತನೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅವಾಂತರದಿಂದಾಗಿ ಅನೇಕ ಕಚೇರಿಗಳಿಗೆ ಇಂದು ರಜೆ ಘೋಷಿಸಲಾಗಿದೆ. ತಮ್ಮ ಇಂದಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಜನರು ವರುಣನನ್ನು ಶಪಿಸುತ್ತಾ ಮನೆಗಳಲ್ಲೇ ಕಾಲ ಕಳೆಯುವಂತಾಗಿದೆ.

ನಿನ್ನೆ ರಾತ್ರಿಯಿಂದ ದ್ವೀಪನಗರಿ ಮುಂಬೈ ಮತ್ತು ಪಶ್ಚಿಮ ಉಪನಗರಗಳಲ್ಲಿ ಅನೇಕ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಬೆಳಗ್ಗೆ ಹೊತ್ತಿಗೆ ಅನೇಕ ಪ್ರದೇಶಗಳ ಜಲಾವೃತವಾಗಿ ವಾಹನಗಳು ಮತ್ತು ರೈಲು ಸಂಚಾರಗಳನ್ನು ರದ್ದುಗೊಳಿಸಲಾಯಿತು.

ಜನರು ಸೊಂಟ ಮಟ್ಟದ ನೀರಿನಲ್ಲಿ ಸಾಗುತ್ತಿದ್ದ ಅವಾಂತರ ದೃಶ್ಯಗಳು ಕೆಲವೆಡೆ ಕಂಡು ಬಂದಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಎರಡನೇ ಬಾರಿ ದಾಖಲೆ ಪ್ರಮಾಣದ ಹಠಾತ್ ಮಳೆಯಿಂದ ಮುಂಬೈ ತತ್ತರಿಸಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ.

Facebook Comments