ಮುಂಬೈನಲ್ಲಿ ಕನ್ನಡಿಗರ ಕನ್ನಡ ಡಿಂಡಿಮ

ಈ ಸುದ್ದಿಯನ್ನು ಶೇರ್ ಮಾಡಿ

ಕಿಕ್ಕೇರಿ, ಜ.12- ಪ್ರಥಮ ಬಾರಿಗೆ ಹಿರಿಯ ಗಾಯಕ ವೈ.ಕೆ. ಮುದ್ದುಕೃಷ್ಣ ಸಾರಥ್ಯದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಸಂಗೀತ ಸಮ್ಮೇಳನವನ್ನು ಮುಂಬೈನಲ್ಲಿ ನಡೆಸಿಕೊಟ್ಟು ಹೊರರಾಜ್ಯದಲ್ಲಿ ಕನ್ನಡದ ಕಂಪು ಹೊರಸೂಸುವಂತೆ ಮಾಡಲಾಯಿತು. ಹೊರರಾಜ್ಯ ಮುಂಬೈನಲ್ಲಿ ನಿನ್ನೆ ಹಾಗೂ ಇಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಹಮ್ಮಿಕೊಂಡಿದ್ದ 17ನೆ ಸುಗಮ ಸಂಗೀತ ಸಮ್ಮೇಳನ ಮಹಾರಾಷ್ಟ್ರದ ಜನರ ಮನದಲ್ಲಿ ಕನ್ನಡದ ಕಂಪು ಅಚ್ಚಳಿಯದಂತೆ ಉಳಿಯುವಂತಾಯಿತು.

ಸಮ್ಮೇಳನದಲ್ಲಿ ನಾಡಿನ ಸಕ್ಕರೆ ಸೀಮೆ ಮಂಡ್ಯ ಜಿಲ್ಲೆಯ ಅಕ್ಕರೆಯ ಮಹಿಳೆಯರು, ಯುವತಿಯರು ಮತ್ತು ಚಿಣ್ಣರ ದಂಡು ಹೊಸ ಬೆಡಗು ನೀಡಿತು.  ಮ್ಮೇಳನದಲ್ಲಿ ಹಿರಿಯ ಗಾಯಕರಾದ ಡಾ. ಬಿ.ಕೆ. ಸುಮಿತ್ರಾ, ಬಿ.ವಿ. ಶ್ರೀನಿವಾಸ್, ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರ ಸಾರಥ್ಯದಲ್ಲಿ ಮುಂಬೈ ಕನ್ನಡಿಗರು ಹತ್ತು-ಹಲವು ಗೀತಗಾಯನ ಹಾಡುವುದನ್ನು ಕೇವಲ ನಾಲ್ಕೈದು ದಿನಗಳಲ್ಲಿ ಕಲಿತು ವೇದಿಕೆಯಲ್ಲಿ ಹಾಡಿ ನಲಿದಾಡಿ ಸಮ್ಮೋಹನಗೊಳಿಸಿದರು.

ಅರಳಿದ ಮೈಸೂರು ಮಲ್ಲಿಗೆ: ಮುಂಬೈ ಕನ್ನಡಿಗರು ವಿವಿಧ ಕನ್ನಡಪರ ಸಂಘ-ಸಂಸ್ಥೆಗಳೊಂದಿಗೆ ತಿಂಗಳಿನಿಂದ ಕಾರ್ಯಕ್ರಮಕ್ಕೆ ಹಗಲಿರುಳು ಯಶಸ್ವಿಗೊಳಿಸಿದರು. ಕರಾವಳಿ ಸೀಮೆಯವರೊಂದಿಗೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ಕುಸುಮಗಳು ಮೈಸೂರು ಮಲ್ಲಿಗೆಯ ಕಂಪನ್ನು ಪಸರಿಸಿದರು. ಬಿಡುವಿಲ್ಲದ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಕನ್ನಡದ ಕಹಳೆಯನ್ನು ಕಾವ್ಯಗಾಯನದ ಮೂಲಕ ಅನುರಣಿಸಿ ಭಾವಗೀತಾ ಲಹರಿಯಲ್ಲಿ ಮಿಂದೆದ್ದರು.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಒಂದೇ ಒಂದೇ ನಾವೆಲ್ಲರೂ ಒಂದೇ… ಗೀತೆ ಭಾವೈಕ್ಯತೆಯನ್ನು ಸಾರಿದರೆ, ಮತ್ತೀಘಟ್ಟ ಕೃಷ್ಣಮೂರ್ತಿ ವಿರಚಿತ ಎಂಥಾ ಚೆಲುವನಾಡು… ಕನ್ನಡ ನಾಡಿನ ಸುಗಂಧವನ್ನು ಪಸರಿಸಿತು. ದಾಸಶ್ರೇಷ್ಠ ಪುರಂದರರ ಕಾಗದ ಬಂದಿದೆ ಕಾಗದ… ಗೀತೆ ಭಕ್ತಿಭಾವದಲ್ಲಿ ತೇಲಿಸಿತು. ಪುತಿನ ಅವರ ಬೆಳ್‍ಬೆಲ್ ಬೆಳದಿಂಗಳು ಗೀತೆಯ ಜಲಕ್ ಇಡೀ ಸಭಾಂಗಣವನ್ನುಮಂತ್ರಮುಗ್ಧಗೊಳಿಸಿತು.

ಮುಂಬೈ ಕನ್ನಡದ ಕಂದಮ್ಮಗಳು ಶಾಲೆಗೆ ಬಿಡುವು ಕೊಟ್ಟು ಮೂಡಲ್ ಕುಣಿಗಲ್ ಕೆರೆ ಜಾನಪದ ಗೀತೆಗೆ ಹಾಕಿದ ಭರತನಾಟ್ಯದ ಹೆಜ್ಜೆಗಳು ಹೊಸತನದ ಹೆಜ್ಜೆಯೊಂದಿಗೆ ಎಲ್ಲರ ಮನಸ್ಸಿಗೆ ಲಗ್ಗೆ ಇಟ್ಟಿತು.

ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷೆ ಕಲಾಶ್ರೀ ಡಾ. ಜಯಶ್ರೀ ಅರವಿಂದ್ ಅವರನ್ನು ಬೆಳ್ಳಿ ಸಾರೋಟ್‍ನಲ್ಲಿ ವಿವಿಧ ಜÁನಪದ ಕಲಾ ಪ್ರಾಕಾರ, ಪೂರ್ಣಕುಂಭದ ಮೆರವಣಿಗೆಯಲ್ಲಿ ಮುಂಬೈ ಕನ್ನಡಿಗರು ನೂರಾರು ಸಾಹಿತಿ, ಕವಿ, ಗಾಯಕ, ಸಂಘಟಕರು, ಕನ್ನಡಿಗರೊಂದಿಗೆ ಸಭಾ ಮಂಟಪಕ್ಕೆ ಕರೆತಂದದ್ದು ವಿಶೇಷವಾಗಿತ್ತು.

Facebook Comments