ನನ್ನ ಗೆಲುವು ನೂರಕ್ಕೆ 200ರಷ್ಟು ಪಕ್ಕಾ : ಮುನಿರತ್ನ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22-ಕಳೆದ ಅವಧಿಯಲ್ಲಿ ನಾನು ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರಾದ್ಯಂತ ಮತದಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಈ ಬಾರಿ ನನ್ನ ಗೆಲುವು 100ಕ್ಕೆ 200ರಷ್ಟು ಖಚಿತ ಎಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಉಪಚುನಾವಣೆ ಹಿನ್ನೆಲೆ ಇಂದು ಕ್ಷೇತ್ರದ ಮತ್ತಿಕೆರೆಯ ಬಂಡೆಪ್ಪ ಗಾರ್ಡನ್, ಬಿಎಸ್‍ಎನ್‍ಎಲ್ ಲೇಔಟ್, ಜೆಪಿಪಾರ್ಕ್ ಮತ್ತಿತರ ಕಡೆ ಬಿಬಿಎಂಪಿ ಮುಖಂಡರಾದ ಬಿ.ಆರ್.ನಂಜುಂಡಪ್ಪ, ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.

ನಾನು ಶಾಸಕನಾಗಿ ಜಾತಿ-ಧರ್ಮ, ಮೇಲು-ಕೀಳು ಯಾವುದನ್ನೂ ಲೆಕ್ಕಿಸದೆ ಮತದಾರರಿಗೆ ಎಲ್ಲ ರೀತಿಯ ನೆರವು ನೀಡಿದ್ದೇನೆ. ಕ್ಷೇತ್ರಕ್ಕೆ ಅಗತ್ಯವಾದ ಕುಡಿಯುವ ನೀರು, ಚರಂಡಿ, ಬೀದಿದೀಪ, ರಸ್ತೆ ಅಗಲೀಕರಣ, ಸೂರಿಲ್ಲದವರಿಗೆ ಸೂರು, ಪಡಿತರಚೀಟಿ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸೇರಿದಂತೆ ಹತ್ತು ಹಲವು ಸೇವಾ ಕಾರ್ಯಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ನನಗೆ ಕ್ಷೇತ್ರಾದ್ಯಂತ ಎಲ್ಲ ಸಮುದಾಯದವರು ಪ್ರೀತಿವಿಶ್ವಾಸ, ಅಭಿಮಾನದಿಂದ ಕಾಣುತ್ತಿದ್ದಾರೆ. ನನ್ನ ಗೆಲುವಿಗೆ ಕಾರ್ಯಕರ್ತರೇ ಶ್ರಮಿಸುತ್ತಿದ್ದಾರೆ. ನನಗೆ ಈಗಲೂ ಗೆಲುವಿನ ಬಗ್ಗೆ ಯಾವುದೇ ಆತಂಕವಿಲ್ಲ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಪ್ರತಿಪಕ್ಷದವರು ಅನಗತ್ಯವಾಗಿ ನನ್ನ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸಂಸದರೊಬ್ಬರು ಮತದಾರರ ಮನೆಗೆ ತೆರಳಿ ಗುರುತಿನಚೀಟಿ, ಅದರ ಸಂಖ್ಯೆ ಕೇಳುವ ಅಗತ್ಯ ವೇನಿದೆ ಎಂದು ಪ್ರಶ್ನಿಸಿದರು.

ರಾಜರಾಜೇಶ್ವರಿನಗರದ ಜನತೆ ಶಾಂತಿಪ್ರಿಯ ರಾಗಿದ್ದು, ಇಲ್ಲಿ ಗೂಂಡಾಗಿರಿ, ದಬ್ಬಾಳಿಕೆ, ಬೆದರಿಕೆಗೆ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಾವು ಕೂಡ ಶಾಂತಿಯುತವಾಗಿಯೇ ಚುನಾವಣೆ ನಡೆಸಲು ಬದ್ದರಾಗಿದ್ದೇವೆ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬಾರದೆಂದು ಎಚ್ಚರಿಸಿದರು.  ರಾಜರಾಜೇಶ್ವರಿನಗರದಲ್ಲಿ ಶಾಂತಿಯುತ ಮತದಾನ ನಡೆಯಬಾರದೆಂಬುದು ಕೆಲವರ ಪಿತೂರಿಯಾಗಿದೆ. ಹೀಗಾಗಿಯೇ ಗೂಂಡಾಗಿರಿ, ದಬ್ಬಾಳಿಕೆ ನಡೆಸುತ್ತಾರೆ. ಮತದಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಆರ್‍ಆರ್‍ನಗರಕ್ಕೆ ಕೇವಲ ಅರೆ ಮಿಲಿಟರಿ ಬಂದರೆ ಸಾಲದು, ನ್ಯಾಯಬದ್ಧ ಮತ್ತು ಸುವ್ಯವಸ್ಥಿತವಾಗಿ ಮತದಾನ ನಡೆಯಲು ಸೇನಾಪಡೆಯನ್ನು ನಿಯೋಜಿಸಬೇಕೆಂದು ನಾನೇ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆ ಯುತ್ತೇನೆ ಎಂದು ಹೇಳಿದರು.

ಕೆಲವರು ಹೊರಗಿನಿಂದ ಬಂದು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶವನ್ನು ಕೊಡುವುದಿಲ್ಲ. ಆರ್‍ಆರ್‍ನಗರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಎಲ್ಲವನ್ನು ಎದುರಿಸುವ ಶಕ್ತಿಯಿದೆ. ನನಗೆ ವಿಜಯಲಕ್ಷ್ಮಿ ಒಲಿಯುವುದರಲ್ಲಿ ಸಂದೇಹ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments