ಉಪಚುನಾವಣೆಯಲ್ಲಿ ಎದುರಾಳಿ ಕುಸುಮಾ ಬಗ್ಗೆ ಮುನಿರತ್ನ ಅವರ ಅಭಿಪ್ರಾಯವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

– ಮಹಾಂತೇಶ್ ಬ್ರಹ್ಮ
ಪಕ್ಷಾಂತರ ಕಾಯ್ದೆ ಜಾರಿಗೆ ತಂದರೂ ರಾಜಕೀಯ ಚದುರಂಗದಾಟದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಲೇ ಇದೆ. ಮುಂದೆಯೂ ನಡೆಯುತ್ತಲೇ ಇರುತ್ತದೆ. ಏಕೆಂದರೆ ಬದಲಾವಣೆ ಜಗದ ನಿಯಮ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬೇಸತ್ತು ರಾಜೀನಾಮೆ ನೀಡಿ ಬಿಜೆಪಿ ಬಾವುಟ ಹಿಡಿದವರಲ್ಲಿ ಮುನಿರತ್ನ ಸಹ ಒಬ್ಬರು.

ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಗೆದ್ದು ಶಾಸಕರಾಗಿದ್ದ ಮುನಿರತ್ನ ಅವರು ಬಹಳ ಬುದ್ಧಿವಂತ ರಾಜಕಾರಣಿ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ತನ್ನದೇ ಆದ ವೋಟ್ ಬ್ಯಾಂಕ್ ಇಟ್ಟುಕೊಂಡಿರುವ ಪ್ರಭಾವಿ ರಾಜಕಾರಣಿ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮುನಿರತ್ನಅವರಿಗೆ ಮಧ್ಯಮ ಮತ್ತು ಕೆಳವರ್ಗದ ಮತದಾರರ ಮೇಲೆ ಅದೇನೋ ಒಂಥರ ವಿಶೇಷ ಒಲವಿದೆ. ಅದಕ್ಕಾಗಿಯೇ ಅವರಿಗಾಗಿ ಕುಕ್ಕರ್,ಸೀರೆ, ಕೇಬಲ್ ಸೆಟ್‍ಅಪ್ ಬಾಕ್ಸ್ ದೀಪಾವಳಿ ಹಬ್ಬದಲ್ಲಿ ಪಟಾಕಿ ಬಾP್ಸï ಹೀಗೆ ಬಡ ಜನರಿಗೆ ಉಚಿತವಾಗಿ ಕೊಡುತ್ತ ಕ್ಷೇತ್ರದ ಜನರ ಜತೆ ಗಟ್ಟಿ ಸಂಬಂಧ ಬೆಳೆಸಿಕೊಂಡು ಬಂದಿರುವ ಮುನಿರತ್ನ ಬಹಳ ಮಹತ್ವಕಾಂಕ್ಷಿ ರಾಜಕಾರಣಿ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಇವರಿಗೆ ಒಳ್ಳೆಯ ವರ್ಚಸ್ಸಿತ್ತು. ಸಿದ್ದರಾಮಯ್ಯನವರಿಗೆ ಅತ್ಯಾಪ್ತರಾಗಿದ್ದ ಎಸ್.ಬಿ.ಎಂ ಗ್ಯಾಂಗ್‍ನಲ್ಲಿ ಮುನಿರತ್ನ ಸಹ ಒಬ್ಬರು. ಇನ್ನು ಡಿಕೆಶಿ ಸಹೋದರರ ಜತೆ ಬರೀ ರಾಜಕೀಯ ಒಡನಾಟವಲ್ಲದೆ ಭಾವನಾತ್ಮಕ ಸಂಬಂಧವಿತ್ತು. ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ ಇತ್ತು.

ಏಕೆಂದರೆ ಡಿ.ಕೆ.ಶಿವಕುಮಾರ್ ಮತ್ತು ಮುನಿರತ್ನ ಅವರು 25 ವರ್ಷಗಳ ಸ್ನೇಹಿತರು. ಆದರೆ, ಈಗ ಕಾಲ ಬದಲಾಗಿದೆ. ಆ ಸ್ನೇಹ ಮುರಿದುಬಿದ್ದಿದೆ. ರಾಜಕೀಯ ಚದುರಂಗದಾಟದಲ್ಲಿ ಜಿದ್ದಾಜಿದ್ದಿನ ಫೈಟ್ ಶುರುವಾಗಿದೆ. ಏಕೆಂದರೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಇದು ಮೊದಲ ಚುನಾವಣೆ. ಹಾಗಾಗಿ ಶತಾಯ-ಗತಾಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು. ಇದು ಡಿಕೆ ಸಹೋದರರ ಪ್ರತಿಷ್ಠೆಯ ಪ್ರಶ್ನೆ. ಮತ್ತೊಂದು ಕಡೆ ಅತ್ಯಂತ ಹೋರಾಟ ಮಾಡಿ ಬಿಜೆಪಿಯಲ್ಲಿ ಬಿ ಫಾರಂ ಪಡೆದಿರುವ ಮುನಿರತ್ನ ಅವರಿಗೆ ಇದೊಂಥರ ರಾಜಕೀಯದ ಅಸ್ತಿತ್ವ ಪ್ರಶ್ನೆ.

ಗೆದ್ದರೆ ಸುಲಭವಾಗಿ ಸಚಿವ ಸ್ಥಾನ, ಇಲ್ಲವಾದರೆ ಭಾಜಪದಲ್ಲಿ ಮತ್ತೆ ಹೋರಾಟ ಮಾಡಬೇಕಾಗುತ್ತದೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್‍ಗೆ. ಇನ್ನು ಜೆಡಿಎಸ್ ಪಕ್ಷಕ್ಕೆ ಬರುವುದಾದರೆ ಕಳೆದ ಬಾರಿ ನಾಮ ನಿರ್ದೇಶಿತ ಬಿಬಿಎಂಪಿ ಸದಸ್ಯರಾಗಿ ಕೆಲಸ ಮಾಡಿರುವ ಅನುಭವ ಬಿಟ್ಟರೆ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ ಕ್ಷೇತ್ರದಲ್ಲಿ ಅಂತಹ ವರ್ಚಸ್ಸಿಲ್ಲ. ಮತದಾರರಿಗೆ ಮುಖ ಪರಿಚಯವಿಲ್ಲ.

ಆದರೆ, ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮೊನ್ನೆ ಯಾವುದೊ ಒಂದು ತುಂಬಿದ ಜೆಡಿಎಸ್ ಸಭೆಯಲ್ಲಿ ಕುಮಾರಣ್ಣ ರಾಜರಾಜೇಶ್ವರಿ ಕ್ಷೇತ್ರಕ್ಕೆ ಟಿಕೆಟ್ ನೀಡಿ ನನ್ನನ್ನು ಹರಕೆಯ ಕುರಿ ಮಾಡಿಲ್ಲ. ನನ್ನ ಮಾತು ನಂಬಿ ಎಂದು ಗೋಳೋ ಅಂತ ಬಿಕ್ಕಿ ಬಿಕ್ಕಿ ಅತ್ತರು. ರಾಜಕಾರಣದಲ್ಲಿ ಇದೆಲ್ಲ ಮಾಮೂಲು.one man food is another Man’s poison. ಕುಸುಮಾ ಅವರು ಡಿ.ಕೆ.ರವಿ ಅವರ ಪತ್ನಿ, ನಗರಸಭೆ ಮಾಜಿ ಸದಸ್ಯ ಹನುಮಂತರಾಯಪ್ಪನವರ ಪುತ್ರಿ.

ರಾಜಕೀಯ ಹಿನ್ನೆಲೆ ಕುಟುಂಬದಲ್ಲೇ ಬೆಳೆದು ಬಂದಿರುವ ಕುಸುಮಾ ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಆರ್‍ಆರ್ ನಗರ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಅಂತಿಮ ನಿರ್ಣಯ ಮಾಡುವ ಶಕ್ತಿ ಹೊಂದಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ವಿದ್ಯಾವಂತೆ, ಬುದ್ಧಿವಂತೆ ಮಾತಿನಲ್ಲಿ ಚತುರತೆ ಇದೆ. ಅದೇನೋ ಗಂಭೀರತೆ ಇದೆ. ಜತೆಗೆ ಡಿಕೆ ಸಹೋದರರ ತಂತ್ರಗಾರಿಕೆ ಇದೆ. ಕಾಂಗ್ರೆಸ್ ಪಕ್ಷದ ಆಶೀರ್ವಾದ ಇದೆ. ಆದರೆ, ಇವೆಲ್ಲವೂ ಮತದಾರರ ಮನಸ್ಸಿಗೆ ಮುಟ್ಟುತ್ತದೆ ಎಂದು ಹೇಳಲಾಗದು.

ಏಕೆಂದರೆ. ಡಿ.ಕೆ.ರವಿ ವಿಚಾರದಲ್ಲಿ ಕುಸುಮಾ ಅವರನ್ನು ತೀವ್ರವಾಗಿ ವಿರೋಧಿಸುವ ಒಂದು ವರ್ಗವಿದೆ. ಈಗಾಗಲೇ ಆ ವರ್ಗ ಸಾಮಾಜಿಕ ಜಾಲತಾಣದಲ್ಲಿ ಕುಸುಮಾ ಅವರ ವಿರುದ್ಧ ಕೆಲಸ ಮಾಡುತ್ತಿದೆ.  ಇದು ಎಲ್ಲೇ ಒಂದು ಕಡೆ ಕುಸುಮಾ ಅವರಿಗೆ ಹಿನ್ನಡೆಯಾಗಬಹುದು. ಇನ್ನು ಮುನಿರತ್ನ ಅವರ ಮೇಲೆ ಚುನಾವಣಾ ಅಕ್ರಮ ಕೇಸ್ ದಾಖಲಿಸಿದ್ದ ಬಿಜೆಪಿಯ ಕಟ್ಟಾಳು ತುಳಸಿ ಮುನಿರಾಜುಗೌಡ ಆರ್‍ಆರ್ ನಗರ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್‍ನಲ್ಲಿ ಇವರ ಪರವಾಗಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲï.ಸಂತೋಷ್ ಲಾಬಿ ಮಾಡಿದರೂ ಸಹ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಮಾತ್ರ ಮುನಿರತ್ನ.

ಇದರಿಂದ ಕ್ಷೇತ್ರದಲ್ಲಿ ಮುನಿರಾಜು ಗೌಡರ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಆದರೆ, ಮುನಿರಾಜುಗೌಡರು ಮಾತ್ರ ದೇಶ ಮೊದಲು ಪಕ್ಷ ಆಮೇಲೆ, ವ್ಯಕ್ತಿ ಕೊನೆ ಅಂತ ಹೇಳಿದರು. ಆದರೆ, ಈಗ ಇದು ಕೇವಲ ಬರಿ ಮಾತಾಗುತ್ತದೋ ಅಥವಾ ಕೃತಿಯೂ ಆಗುತ್ತದೋ ಎಂಬುದನ್ನು ಕಾದು ನೋಡಬೇಕು. ಆದರೆ, ಯಡಿಯೂರಪ್ಪನವರು ಮಾತ್ರ ಮುನಿರತ್ನ ಅವರನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಸಚಿವರಿಗೆ ತಾಕೀತು ಮಾಡಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನೂ ಸಹ ಮಾಡಿz್ದÁರಂತೆ. ಈ ಎಲ್ಲ ವಿಚಾರಗಳ ಬಗ್ಗೆ ಆರ್‍ಆರ್ ನಗರ ಭಾಜಪ ಅಭ್ಯರ್ಥಿ ಮುನಿರತ್ನ ಅವರ ಜತೆ ಮುಕ್ತವಾಗಿ ಈ ಸಂಜೆ ವಿಶೇಷ ಸಂದರ್ಶನ ನಡೆಸಿದೆ.

#ಚುನಾವಣಾ ಪ್ರಚಾರ ಹೇಗೆ ಸಾಗುತ್ತಿದೆ?
ನನಗೆ ಚುನಾವಣೆ ಹೊಸದಲ್ಲ. 6 ಚುನಾವಣೆಗಳ ಅನುಭವವಿದೆ. ಅದರಲ್ಲಿ ಇದು ಸೇರಿ 4 ಬಾರಿ ನೇರವಾಗಿ ನಾನೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. 2 ಬಾರಿ ಸಂಸದರ ಚುನಾವಣೆ, 1 ಬಾರಿ ಬಿಬಿಎಂಪಿ ಚುನಾವಣೆಗೆ ಕೆಲಸ ಮಾಡಿದ್ದೇನೆ. ಇದು ನನಗೆ 7ನೆ ಚುನಾವಣೆ.

ಕ್ಷೇತ್ರದ ಮತದಾರರ ಸ್ಪಂದನೆ ಹೇಗಿದೆ, ಈಗ ನೀವು ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದೀರಿ..?
ನನಗೆ ಕ್ಷೇತ್ರದ ಮತದಾರರು ಹೊಸಬರಲ್ಲ,ಮತದಾರರಿಗೆ ಮುನಿರತ್ನ ಹೊಸಬರಲ್ಲ.ಕಳೆದ 2 ಬಾರಿ ಶಾಸಕನಾಗಿ ನಾನು ನಿರಂತರವಾಗಿ ಮಾಡಿದ ನನ್ನ ಅಭಿವೃದ್ಧಿ ಕೆಲಸಗಳನ್ನು ನೋಡಿದ್ದಾರೆ. ನನ್ನ ಕಾರ್ಯ ವೈಖರಿ ಅವರಿಗೆ ಹಿಡಿಸಿದೆ. ಪಕ್ಷ ಭೇದ ಮರೆತು ಚುನಾವಣೆಯಲ್ಲಿ ಎಲ್ಲರೂ ನನಗೆ ಮತ ನೀಡುತ್ತಾರೆ.

# ನಿಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಬಗ್ಗೆ ಏನು ಹೇಳುವಿರಿ..?
ಎದುರಾಳಿಗಳು ಯಾರೇ ಇರಲಿ ನಾನೆಂದಿಗೂ ಎದುರಾಳಿಗಳ ಬಗ್ಗೆ ಯೋಚಿಸುವುದಿಲ್ಲ. ನಾನೇನಿದ್ದರೂ ಚುನಾವಣೆಯ ಕಾರ್ಯತಂತ್ರದ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಹಾಗಾಗಿ ಅವರ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲು ಇಚ್ಛಿಸುವುದಿಲ್ಲ. ಬಿಜೆಪಿಯವರು ಧರ್ಮದ ಮೇಲೆ ಹಿಂದುತ್ವದ ಮೇಲೆ ಮತ ಕೇಳುತ್ತಾರೆಂದು ನೀವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಹೇಳಿದ್ದೀರಿ, ಈಗ ಆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು.

# ವೈರಲ್ ಆಗುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ?
ನೋಡಿ, ಆಗ ನನಗೆ ಬಿಜೆಪಿಯ ರಾಷ್ಟ್ರ ಪ್ರೇಮ ಮತ್ತು ತತ್ವ-ಸಿದ್ಧಾಂತದ ಬಗ್ಗೆ ಸತ್ಯ ತಿಳಿದಿರಲಿಲ್ಲ. ಜತೆಗೆ ಇಡೀ ಜಗತ್ತು ಇಂದು ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಕೊಂಡಾಡುತ್ತಿದೆ. ಇವೆಲ್ಲವೂ ನನಗೆ ಸತ್ಯದ ದರ್ಶನ ಮಾಡಿಸಿದೆ. ಅವೆಲ್ಲವನ್ನೂ ಮೆಚ್ಚಿ ಇಂದು ಭಾಜಪ ಸೇರಿದ್ದೇನೆ. ಭಾಜಪ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ.
ನೀವು ಮೂಲತಃ ಸಿನಿಮಾ ನಿರ್ಮಾಪಕರು. ನಿಮ್ಮ ಚುನಾವಣಾ ಪ್ರಚಾರಕ್ಕಾಗಿ ಹಿಂದೆ ಸಾಕಷ್ಟು ಬಾರಿ ಉಪೇಂದ್ರ. ದರ್ಶನ್‍ರಂತಹ ದೊಡ್ಡ ದೊಡ್ಡ ನಟರನ್ನು ಕರೆಸಿ ಸ್ಟಾರ್ ಕ್ಯಾಂಪೆನ್ ಮಾಡಿಸಿದ್ದೀರಿ.

# ಈ ಬಾರಿ ಏನಾದರೂ ಅದರ ಬಗ್ಗೆ ಅಲೋಚನೆ ಮಾಡಿದ್ದೀರ?
ಅದರ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಆದರೆ, ಒಂದಂತೂ ಸತ್ಯ. ನನ್ನ ಒಳ್ಳೆಯತನ ಮೆಚ್ಚಿ ನನಗೆ ಮೊದಲಿನಿಂದಲೂ ಚಿತ್ರರಂಗ ಸದಾ ಬೆಂಬಲ ಕೊಡುತ್ತಿದೆ. ಅದಕ್ಕೆ ನಾನು ಚಿರಋಣಿ. ಇನ್ನು ಕ್ಷೇತ್ರದ ವಿಚಾರಕ್ಕೆ ಬರುವುದಾದರೆ ಕಣ್ಣಿಗೆ ಕಾಣುವಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆ ನನ್ನ ಕೆಲಸಗಳ ಬಗ್ಗೆ ಕ್ಷೇತ್ರದ ಜನರೆ ಈ ಬಾರಿ ಮುನಿರತ್ನ ಅವರನ್ನು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಪ್ರಚಾರ ಮಾಡುತ್ತಿದ್ದಾರೆ. ಅವರ ಆಶೀರ್ವಾದದಿಂದ ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ.
ನೀವು ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಸಚಿವ ಸ್ಥಾನ ನೀಡುತ್ತೇವೆಂದು ಈಗಾಗಲೇ ಬಿಜೆಪಿ ನಿಮಗೆ ಮಾತು ನೀಡಿದೆ.

# ನೀವು ವೈಯಕ್ತಿಕವಾಗಿ ಯಾವುದಾದರೂ ಖಾತೆಗೆ ಬೇಡಿಕೆ ಇಟ್ಟಿದ್ದೀರ..?
ಖಂಡಿತವಾಗಿ ಇಲ್ಲ. ಯಾವ ಅಪೇಕ್ಷೆ ಇಲ್ಲದೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಭಾಜಪ ಪಕ್ಷ ಸೇರಿದ್ದೇನೆ. ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನ್ನ ನಾಯಕರು. ಬಿಜೆಪಿ ಪಕ್ಷ ನನಗೆ ದೇವಾಲಯ. ಅವರು ನನ್ನ ಮೇಲೆ ನಂಬಿಕೆ ಇಟ್ಟು ಏನೇ ಜವಾಬ್ದಾರಿ ಕೊಟ್ಟರೂ ಭಕ್ತಿಯಿಂದ ಪ್ರಸಾದವಾಗಿ ಸ್ವೀಕಾರ ಮಾಡುತ್ತೇನೆ. ಕಾಯ ವಾಚ ಮನಸಾ ಕೆಲಸ ಮಾಡುತ್ತೇನೆ.

ನಿಮ್ಮನ್ನು ಮೊದಲಿನಿಂದಲೂ ಪ್ರಬಲವಾಗಿ ರಾಜಕೀಯವಾಗಿ ವಿರೋಧ ಮಾಡಿಕೊಂಡು ಬಂದವರು ಹೈಕಮಾಂಡ್ ಆಪ್ತರಾಗಿರುವ ತುಳಸಿ ಮುನಿರಾಜು ಗೌಡ. ಆದರೆ, ಈಗ ನಿಮ್ಮ ಗೆಲುವಿಗಾಗಿ ಅವರು ಚುನಾವಣಾ ಕೆಲಸ ಮಾಡುವುದು ಅವರಿಗೆ ಈಗ ಅನಿವಾರ್ಯ.

# ಅವರು ನಿಮ್ಮ ಜತೆ ಒಟ್ಟಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸ ನಿಮಗಿದೆಯಾ?
ಚುನಾವಣೆಯಲ್ಲಿ ನಾನು ಗೆಲ್ಲುವುದು ಎಷ್ಟು ಮುಖ್ಯವೋ, ಭಾಜಪದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ಅಷ್ಟೇ ಮುಖ್ಯ. ನಾನು ಪರಸ್ಪರ ಚರ್ಚೆ ಮಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಂತಿಮವಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾಜಪದ ಗೆಲುವಿನ ಬಾವುಟ ಹಾರಿಸುವುದಷ್ಟೇ ನನ್ನ ಗುರಿ. ಖಂಡಿತವಾಗಿ ಎಲ್ಲರ ಸಹಕಾರ ಮತ್ತು ಮತದಾರರ ಆಶೀರ್ವಾದದಿಂದ ನಾನು ಇದರಲ್ಲಿ ಯಶಸ್ವಿಯಾಗುತ್ತೇನೆ. ಇದಕ್ಕೆ ಕ್ಷೇತ್ರದ ಶಕ್ತಿ ದೇವತೆ ತಾಯಿ ರಾಜರಾಜೇಶ್ವರಿಯೇ ಸಾಕ್ಷಿ.

Facebook Comments