ಗಳಗಳನೆ ಅತ್ತ ಮುನಿರತ್ನ, ನಾಟಕ ಸಾಕು ಎಂದ ಡಿಕೆ ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.28- ಅನಗತ್ಯವಾಗಿ ನನ್ನ ತಾಯಿಯ ಬಗ್ಗೆ ಹೇಳಿಕೆಗಳನ್ನು ನೀಡಬೇಡಿ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಇಂದು ಕಣ್ಣೀರಿಟ್ಟ ಪ್ರಸಂಗ ನಡೆಯಿತು.  ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ವಿರೋಧ ಪಕ್ಷದ ನಾಯಕ ಸಿದ್ದರಾಮ ಯ್ಯ ಅವರು ಹೇಳಿಕೆಗೆ ಪ್ರತಿಕ್ರಿಯಿಸಿ, 25 ವರ್ಷಗಳ ಹಿಂದೆ ತೀರಿಹೋದ ನನ್ನ ತಾಯಿಯ ಬಗ್ಗೆ ಅನಗತ್ಯ ವಾಗಿ ಮಾತನಾಡಬೇಡಿ ಎಂದು ಕಣ್ಣೀರು ಹಾಕಿದರು. ಇಂತಹ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್‍ಗೆ ಶೋಭೆ ತರುವುದಿಲ್ಲ ಎಂದು ನುಡಿದರು.

ಚುನಾವಣಾ ಪ್ರಚಾರದ ವೇಳೆ ನಿನ್ನೆ ಸಿದ್ದರಾಮಯ್ಯ ಅವರು ಪಕ್ಷ ತಾಯಿ ಇದ್ದಂತೆ. ತಾಯಿಯನ್ನೇ ಮಾರಿಕೊಂಡಿದ್ದಾರೆ ಎಂದು ನೀಡಿದ್ದ ಹೇಳಿಕೆಯಿಂದ ನೊಂದು ಇಂತಹ ಆರೋಪಗಳನ್ನು ಮಾಡಬೇಡಿ ಎಂದು ಮನವಿ ಮಾಡಿದರು.

#  ಡಿ.ಕೆ.ಸುರೇಶ್ ತಿರುಗೇಟು : 
ಮುನಿರತ್ನ ಅವರ ವೈಯಕ್ತಿಕ ವಿಚಾರವನ್ನಾಗಲಿ ಅಥವಾ ಅವರ ತಾಯಿ ಬಗ್ಗೆಯಾಗಲಿ ಕಾಂಗ್ರೆಸಿಗರ್ಯಾರೂ ಮಾತನಾಡಿಲ್ಲ. ಚುನಾವಣೆ ಕಾರಣಕ್ಕಾಗಿ ಹೊಸ ನಾಟಕವಾಡಿದರೆ ಜನ ಮರುಳಾಗುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.

ರಾಜರಾಜೇಶ್ವರಿನಗರ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಡಿ.ಕೆ.ಸುರೇಶ್ ಅವರು, ಈ ಹಿಂದೆ ಮುನಿರತ್ನ ಅವರು ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದಂತೆ. ನನ್ನ ಉಸಿರು, ನನ್ನ ರಕ್ತ ಎಂದೆಲ್ಲಾ ಬಹಿರಂಗವಾಗಿ ಹೇಳಿಕೊಂಡಿದ್ದರು. ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹೋಗಿದ್ದರಿಂದ ತಾಯಿಗೆ ದ್ರೋಹ ಮಾಡಿದಂತಾಗಲಿಲ್ಲವೇ ಎಂದು ಜನರೇ ಹೇಳುತ್ತಿದ್ದಾರೆ.

ವಿಷಯವನ್ನು ತಿರುಚಿ ಮುನಿರತ್ನ ವೈಯಕ್ತಿಕ ನೆಲೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಕಣ್ಣೀರಿನ ನಾಟಕವಾಡಿದ್ದಾರೆ ಎಂದರು. ಮುನಿರತ್ನ ಅವರಿಗೆ ಯಾವ ಸೀನನ್ನು ಎಲ್ಲಿ ಕಟ್ ಮಾಡಬೇಕು, ಎಲ್ಲಿ ಜೋಡಿಸಬೇಕು ಎಂಬ ಕಲೆ ಕರಗತವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಇದ್ದವರಾದ್ದರಿಂದ ಇವೆಲ್ಲವೂ ಅನುಭವದ ಮೂಲಕವೇ ಬಂದಿದೆ. ಮುನಿರತ್ನ ಆಡುತ್ತಿರುವ ಹೊಸ ನಾಟಕ ಜನರಿಗೆ ಗೊತ್ತಿದೆ.

ಕಾಂಗ್ರೆಸಿಗರು ಚುನಾವಣಾ ಕಣದಲ್ಲಿ ಈವರೆಗೂ ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡಿಲ್ಲ. ಮುಂದೆ ಕೂಡ ಮಾಡುವುದಿಲ್ಲ. ನಮ್ಮದೇನಿದ್ದರೂ ಪಕ್ಷ ಮತ್ತು ಸಿದ್ದಾಂತ ನಡುವಿನ ಹೋರಾಟ. ಹೀಗಿರುವಾಗ ಮುನಿರತ್ನ ಅವರ ತಾಯಿಯ ಬಗ್ಗೆ ಯಾರಾದರೂ ಮಾತನಾಡುತ್ತಾರೆಯೇ ? ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.

Facebook Comments