Wednesday, April 24, 2024
Homeರಾಜ್ಯಗದಗದಲ್ಲಿ ನಾಲ್ವರ ಭೀಕರ ಕೊಲೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ

ಗದಗದಲ್ಲಿ ನಾಲ್ವರ ಭೀಕರ ಕೊಲೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ

ಬೆಂಗಳೂರು, ಏ.21- ಗದಗ್ನ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿರುವುದು ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಆಸ್ತಿ ವಿಚಾರ ಅಥವಾ ವೈಯಕ್ತಿಕ ಕಾರಣಗಳಿಂದ ಈ ಕೊಲೆ ನಡೆದಿರಬಹುದು ಎಂದು ಶಂಕಿಸಿ ಗದಗ ಜಿಲ್ಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಐವರು ಸುಪಾರಿ ಹಂತಕರು ಇವರ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸಹ ಪೊಲೀಸರಿಗೆ ಗೊತ್ತಾಗಿದೆ. ಪರಾರಿಯಾಗಿರುವ ಹಂತಕರ ಬಂಧನಕ್ಕಾಗಿ ರಚಿಸಲಾಗಿರುವ ಐದು ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಒಂದು ತಂಡ ಮಹಾರಾಷ್ಟ್ರ ಮತ್ತೊಂದು ತಂಡ ಹೈದರಾಬಾದ್ಗೂ ತೆರಳಿವೆ.

ನಾಲ್ವರ ಕೊಲೆ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಸುತ್ತೇವೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.

ಗದಗ ನಗರದ ದಾಸರ ಓಣಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಕುಟುಂಬ ವಾಸವಾಗಿದೆ. ಸುನಂದಾ ಬಾಕಳೆ ಪುತ್ರ ಕಾರ್ತಿಕ ಬಾಕಳೆಯ (28) ನಿಶ್ಚಿತಾರ್ಥ ಕಾರ್ಯದ ಹಿನ್ನೆಲೆಯಲ್ಲಿ ಸಂಬಂಧಿಕರಾದ ಪರಶುರಾಮ ಕುಟುಂಬ ಕೊಪ್ಪಳದಿಂದ ಸುನಂದಾ ಬಾಕಳೆ ಮನೆಗೆ ಬಂದಿದ್ದರು.

ಪರಶುರಾಮ ಹಾದಿಮನಿ (55), ಪತ್ನಿ ಲಕ್ಷ್ಮಿ (45) ಮತ್ತು ಪುತ್ರಿ ಆಕಾಂಕ್ಷಾ (16) ಸುನಂದಾ ಬಾಕಳೆ ಮನೆಯಲ್ಲಿ ತಂಗಿದ್ದರು.ಏ.19ರ ರಾತ್ರಿ ಪರಶುರಾಮ ಹಾದಿಮನಿ ಪುತ್ರಿ ಆಕಾಂಕ್ಷಾ ಹುಟ್ಟುಹಬ್ಬವನ್ನು ಸುನಂದಾ ಬಾಕಳೆ ಮನೆಯಲ್ಲಿ ಆಚರಿಸಿ ಎಲ್ಲರೂ ಮಲಗಿದ್ದಾರೆ. ಪರಶುರಾಮ ಕುಟುಂಬ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿತ್ತು.

ಮುಂಜಾನೆ ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿಯನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕಿಟಿಕಿ ಒಡೆದ ಮತ್ತು ಕಿರಿಚಾಟದ ಸದ್ದು ಕೇಳಿ ಏನಾಯಿತೆಂದು ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್ ಬಾಕಳೆ ನೋಡಲು ಮೇಲೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ್ನನ್ನೂ ಕೊಲೆ ಮಾಡಿದ್ದರು. ಬಳಿಕ ದುಷ್ಕರ್ಮಿಗಳು ಮನೆಯ ಮಾಲಿಕ ಪ್ರಕಾಶ್ ಬಾಕಳೆ ಮತ್ತು ಪತ್ನಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಲಿ ತಟ್ಟಿದ್ದರು.

ಆದರೆ ದಂಪತಿ ಬಾಗಿಲು ತೆಗೆಯದೆ ಕಳ್ಳರು ಬಂದಿರಬಹುದೆಂದು ಶಂಕಿಸಿ ಪೊಲೀಸರಿಗೆ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಫೋನ್ ಮಾಡಿದ್ದರು. ನೆರೆಹೊರೆಯವರು ಬರುತ್ತಿದ್ದಂತೆ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಚರಂಡಿಯಲ್ಲಿ ಬಿಸಾಡಿದ್ದಾರೆ. ಸುದ್ದಿ ತಿಳಿದು ಗದಗ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News