ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿ ಪತಿ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.28- ಶೀಲ ಶಂಕಿಸಿ ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೈಯಂಬಳ್ಳ ಗ್ರಾಮದ ಶಿವಮ್ಮ (30) ಕೊಲೆಯಾದ ಮಹಿಳೆ.

ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಮ್ಮರನ್ನು ಎರಡು ವರ್ಷದ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೃಷ್ಣ 2ನೇ ವಿವಾಹವಾಗಿದ್ದನು.
ತದನಂತರದಲ್ಲಿ ಪದೇ ಪದೇ ಪತ್ನಿ ಜೊತೆ ಜಗಳವಾಡುತ್ತಿದ್ದನು. ಈ ಸಂಬಂಧ ಶಿವಮ್ಮ ಈ ಹಿಂದೆ ದೂರು ನೀಡಿದ್ದರಿಂದ ಕೃಷ್ಣ ಜೈಲಿಗೂ ಹೋಗಿದ್ದನು.

ಇತ್ತೀಚೆಗೆ ವಿನಾಕಾರಣ ಶೀಲಶಂಕಿಸಿ ಪತ್ನಿ ಜೊತೆ ಜಗಳವಾಡುತ್ತಿದ್ದನು. ರಾತ್ರಿ ಸಹ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಯ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದಾನೆ.

ಗಂಭೀರ ಗಾಯಗೊಂಡ ಶಿವಮ್ಮ ಸಾವನ್ನಪ್ಪಿದ್ದು, ಈ ಸಂಬಂಧ ಟೀ.ನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments