ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಚೇಳೂರು ,ಜು.16-ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗುಬ್ಬಿ ತಾಲ್ಲೂಕಿನ ಹೂವಿನ ಕಟ್ಟೆ ಗ್ರಾಮದ ರಂಗನಾಥ(35) ಎಂದು ಗುರುತಿಸಲಾಗಿದೆ.

ಅವಿವಾಹಿತನಾಗಿದ್ದ ರಂಗನಾಥ ಮನೆ ಸಮೀಪದ ಗುಡ್ಡದ ಲಕ್ಷ್ಮಿ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗೆ ಸಮೀಪದ ಮನೆಯವರೊಂದಿಗೆ ಜಗಳವಾಡಿಕೊಂಡಿದ್ದನು ಎನ್ನಲಾಗಿದೆ. ಈ ನಡುವೆ ಮಧ್ಯರಾತ್ರಿ ರಂಗನಾಥನನ್ನು ದುಷ್ಕರ್ಮಿಗಳು ದೇವಸ್ಥಾನದ ಬಳಿಯೇ ಬರ್ಬರವಾಗಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ಈ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದ ಗ್ರಾಮಸ್ಥರೊಬ್ಬರು ನೋಡಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಚೇಳೂರು ಠಾಣೆ ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತ್, ಸಿಬ್ಬಂದಿಗಳಾದ ಪಾತರಾಜು, ಮಧು, ರಾಜ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ, ಶಿರಾ ಗ್ರಾಮಾಂತ ಡಿವೈಎಸ್ಪಿ ವೆಂಕಟೇಶ್, ಗುಬ್ಬಿ ವೃತ್ತ ನಿರೀಕ್ಷಕ ದೀಪಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಬಗ್ಗೆ ಈ ಸಂಜೆಯೊಂದಿಗೆ ಮಾತನಾಡಿದ ಎಸ್‍ಪಿ ಕೋನವಂಶಿಕೃಷ್ಣ ಅವರು ಮೇಲ್ನೋಟಕ್ಕೆ ಅನೈತಿಕ ಸಂಬಂಧ ವಿಚಾರವಾಗಿ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತಂಡವೊಂದನ್ನು ರಚಿಸಿದ್ದು , ಈ ತಂಡ ಆರೋಪಿಗಳನ್ನು ಶೀಘ್ರ ಬಂಧಿಸಲಿದೆ ಎಂದರು.

Facebook Comments