ಯುವಕನ ಬರ್ಬರ ಕೊಲೆ..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.19- ಯುವಕ ನೊಬ್ಬನನ್ನು ಪುಸಲಾಯಿಸಿ ಕರೆದೊಯ್ದ ದುಷ್ಕರ್ಮಿಗಳು ಆತನನ್ನು ಮಚ್ಚು ಮತ್ತು ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಾಡುಸೊಣ್ಣಪ್ಪನಹಳ್ಳಿ ಬಳಿ ನಡೆದಿದೆ. ಕೊಲೆಯಾದ ಯುವಕ ಮಸೀನ್ (26) ಎಂದು ತಿಳಿದುಬಂದಿದ್ದು, ಈತ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ನಿವಾಸಿ ಎಂದು ಗೊತ್ತಾಗಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಸೀನ್ ನಿನ್ನೆ ಸಂಜೆ ಮನೆಗೆ ಬಂದಾಗ ಕೆಲವರು ಆತನಿಗೆ ಕರೆ ಮಾಡಿದ್ದಾರೆ. ನಂತರ ಆತ ಠಾಕುಟೀಕಾಗಿ ಬಟ್ಟೆ ತೊಟ್ಟು ತೆರಳಿದ್ದಾನೆ.
ತಡರಾತ್ರಿವರೆಗೂ ಮಸೀನ್ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇಂದು ಮುಂಜಾನೆ ಆತನ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಮನಬಂದಂತೆ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಬಾಗಲೂರು ಠಾಣೆ ಇನ್ಸ್‍ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಬಗ್ಗೆ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments