ಮಾತುಮಾತಲ್ಲೆ ಶುರುವಾದ ಜಗಳ ಮರ್ಡರ್‌ನಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಪಿರಿಯಾಪಟ್ಟಣ, ಫೆ.12- ಕ್ಷುಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ತಾಲೂಕಿನ ಕಂಪಲಾಪುರ ಗ್ರಾಮದ ದಾಸಯ್ಯ ಎಂಬುವವರ ಮಗ ಡಿ.ಕಾಂತರಾಜು (44) ಎಂಬಾತ ಕೊಲೆಯಾಗಿದ್ದಾರೆ. ಇದೇ ಗಲಾಟೆಯಲ್ಲಿ ಈತನ ತಮ್ಮ ನಾರಾಯಣನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ಇದೇ ಗ್ರಾಮದ ಈರಯ್ಯ ಎಂಬುವವರ ಮಗ ರಾಜು ಎಂಬಾತ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸ್‍ಠಾಣೆಯಲ್ಲಿ ಶರಣಾಗಿದ್ದಾನೆ.  ಘಟನೆ ವಿವರ: ಸಹೋದರರಾದ ರಾಜು ಮತ್ತು ಸಂತೋಷ್ ಅಲಿಯಾಸ್ ತಿರುಮಲೇಶ್ ಎಂಬುವವರು ಡಿ.ಕಾಂತರಾಜು ಮನೆಯಲ್ಲಿ ಫ್ಲಂಬರಿಂಗ್ ಕೆಲಸ ಮಾಡಿದ್ದು, ಇದು ಸರಿಯಾಗಿಲ್ಲ, ಸೋರುತ್ತಿದೆ ಎಂಬ ಕಾರಣಕ್ಕೆ ಫೆ.5ರಂದು ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು.

ನಂತರ ಕಂಪಲಾಪುರ ಗ್ರಾಮದ ಸರ್ಕಲ್‍ನಲ್ಲಿ ಫೆ.10ರಂದು ರಾತ್ರಿ 10.30ರ ಸಮಯದಲ್ಲಿ ರಾಜು, ಸಂತೋಷ್, ಹಾಗೂ ಸಹೋದರರಾದ ಡಿ.ನಾರಾಯಣ, ಡಿ.ಕಾಂತರಾಜುರೊಂದಿಗೆ ಜಗಳ ನಡೆದಿದೆ.  ರಾಜು ಮತ್ತು ಸಂತೋಷ್ ಬೈಕ್ ಶಾಕಪ್‍ಜರ್ ರಾಡ್‍ನಿಂದ ಡಿ.ಕಾಂತರಾಜು ಮೇಲೆ ಹಲ್ಲೆ ನಡೆಸಿದ್ದು, ಆತ ಮೃತಪಟ್ಟಿದ್ದಾನೆ. ಹಲ್ಲೆ ತಡೆಯಲು ಬಂದ ತಮ್ಮ ನಾರಾಯಣನಿಗೂ ತೀವ್ರವಾಗಿ ಹಲ್ಲೆ ನಡೆಸಿದ್ದು, ಗಾಯಾಳುವಾಗಿದ್ದಾನೆ ಎಂದು ಮೃತನ ಸಂಬಂಧಿ ಕೆ.ಸಿ.ಧರ್ಮಪಾಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಎಸ್‍ಪಿ ಭೇಟಿ: ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ಡಿವೈಎಸ್‍ಪಿ ಸುಂದರ್‍ರಾಜ್, ಸರ್ಕಲ್‍ಇನ್ಸ್‍ಪೆಕ್ಟರ್ ಬಿ.ಆರ್. ಪ್ರದೀಪ್‍ಕುಮಾರ್, ಎಸ್‍ಐ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಕೌಟುಂಬಿಕ ಪ್ರಕರಣಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಬಿಗುವಿನ ವಾತಾವರಣ: ಕೊಲೆ ಪ್ರಕರಣದಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಮುನ್ನೆಚ್ಚಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರಕರಣದ ಆರೋಪಿ ರಾಜು ಶರಣಾಗಿದ್ದು, ಸಂತೋಷ್ ಬಂಧನಕ್ಕೆ ಬಲೆ ಬೀಸಿದ್ದಾರೆ.

Facebook Comments