ಮಂಗಳಮುಖಿ ಕೊಲೆ ಆರೋಪಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಮಂಗಳಮುಖಿಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೃತ್ಯ ನಡೆದ 48 ಗಂಟೆಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರುಣ್‍ಕುಮಾರ್ (27) ಮತ್ತು ಶ್ರೀನಾಥ್ (30) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ, ಚಾಕು, ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾ.17ರಂದು ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ವ್ಯಾಪ್ತಿಯ ಚಿಕ್ಕಗೌಡನಪಾಳ್ಯ, 5ನೇ ಕ್ರಾಸ್‍ನಲ್ಲಿ ಮಂಗಳಮುಖಿ ವಿಜಯ್ ಎಂಬುವನನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ಸುಬ್ರಹ್ಮಣ್ಯಪುರ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೃತ್ಯ ನಡೆದ 48 ಗಂಟೆಯೊಳಗೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments