ಹಳೆ ದ್ವೇಷದಿಂದ ಯುವಕನ ಕೊಂದಿದ್ದ 6 ಮಂದಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.26-ಹಳೆ ದ್ವೇಷದಿಂದ ಯುವಕನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಜೆಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆಸಿ ನಗರದ ಮುಖೇಶ್ (38), ಸಂತೋಷ್ (37), ಚೇತನ್ (22), ಆರ್‍ಟಿ ನಗರದ ಸಂದೀಪ್ (29), ಸೋಮಯ್ಯ (25), ಯೋಗೇಶ್ (30) ಬಂಧಿತ ಆರೋಪಿಗಳು.

ಏ.21ರಂದು ರಾತ್ರಿ 9 ಗಂಟೆಯಲ್ಲಿ ವಿಘ್ನೇಶ್ (20) ಬೈಕ್ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದಾಗ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಈತನ ಸ್ನೇಹಿತ ಸೋನು ಎಂಬಾತ ಇವರ ಮನೆಗೆ ಬಂದು ವಿಘ್ನೇಶನಿಗೆ ಪಿಜಿ ರಸ್ತೆಯ ಆರ್‍ಕೆ ಬ್ಲಾಕ್‍ನಲ್ಲಿ ಯಾರೋ ಆಯುಧಗಳಿಂದ ಹಲ್ಲೆ ಮಾಡಿದ್ದಾರೆಂದು ಕುಟುಂಬದವರಿಗೆ ತಿಳಿಸಿದ್ದನು.

ತಕ್ಷಣ ಕುಟುಂಬದವರು ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ವಿಘ್ನೇಶನ ಕುತ್ತಿಗೆ ಮತ್ತು ಹೊಟ್ಟೆಗೆ ತೀವ್ರ ಗಾಯವಾಗಿದ್ದರಿಂದ ಸ್ನೇಹಿತರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿರುವ ವಿಷಯ ತಿಳಿದು ಆಸ್ಪತ್ರೆ ಬಳಿ ಹೋಗಿದ್ದಾರೆ. ವೈದ್ಯರು ವಿಘ್ನೇಶ್‍ನನ್ನು ಪರೀಕ್ಷಿಸಿ ಮೃತಪಟ್ಟಿದ್ದಾ ರೆಂದು ತಿಳಿಸಿದ್ದರು.

ಈ ಸಂಬಂಧ ವಿಘ್ನೇಶ್ ಪೊಷಕರು ಜೆಸಿ ನಗರ ಪೊಲೀಸರಿಗೆ ಏ.22ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೆÇಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಮೇಶ್ ಪತ್ತೆಕಾರ್ಯ ಪ್ರಗತಿಯಲ್ಲಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೆಲ ತಿಂಗಳ ಹಿಂದೆ ವಿಘ್ನೇಶನಿಗೂ ಮತ್ತು ಆರೋಪಿಗಳಾದ ಸಂತೋಷ್, ರಮೇಶ್ ಎಂಬಾತನೊಂದಿಗೆ ಗಲಾಟೆ ನಡೆದಿತ್ತು.

ಹಳೆ ದ್ವೇಷಕ್ಕಾಗಿ ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ. ವಿಘ್ನೇಶನು ಮಹಾಲಕ್ಷ್ಮಿ ಲೇಔಟ್ ಠಾನೆಯ ಸುಲಿಗೆ ಪ್ರಕರಣ ಮತ್ತು ಜೆಸಿ ನಗರ ಠಾಣೆಯ ಎರಡು ಕೊಲೆ ಯತ್ನ ಹಾಗೂ ಮೂರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ