ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ ಯುವಕನ ಇರಿದು ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.18- ಸ್ನೇಹಿತರೊಂದಿಗೆ ಬಾರ್‍ನಲ್ಲಿ ಪಾರ್ಟಿ ಮಾಡಿ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆರ್‍ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಸಿ ನಗರದ ಮುದ್ದಮ್ಮ ಗಾರ್ಡನ್ ನಿವಾಸಿ ಲೋಕೇಶ್ (25) ಕೊಲೆಯಾದ ಯುವಕ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನ ತಿಳಿಸಿದ್ದಾರೆ.

ಈ ಹಿಂದೆ ಕಾಲ್‍ಸೆಂಟರ್‍ನಲ್ಲಿ ಉದ್ಯೋಗದಲ್ಲಿದ್ದ ಲೋಕೇಶ್ ನಂತರ ಉದ್ಯೋಗ ತೊರೆದಿದ್ದನು. ನಿನ್ನೆ ಸ್ನೇಹಿತರ ಜತೆ ಹೋಗಿ ಬಾರ್‍ವೊಂದರಲ್ಲಿ ಲೋಕೇಶ್ ಪಾರ್ಟಿ ಮಾಡಿದ್ದಾನೆ.  ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಪೆಟ್ರೋಲ್ ಖಾಲಿಯಾಗಿದೆ. ನಂತರ ಪೆಟ್ರೋಲ್ ಹಾಕಿಸಿಕೊಂಡು ಪೆಟ್ರೋಲ್‍ಬಂಕ್‍ನಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಆರ್‍ಟಿ ನಗರ, 80 ಅಡಿ ರಸ್ತೆ, ತಿಮ್ಮಯ್ಯ ಗಾರ್ಡನ್ ಬಸ್ ನಿಲ್ದಾಣದ ಬಳಿ ಮೂರ್ನಾಲ್ಕು ಮಂದಿ ಈತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾರೆ.

ಲೋಕೇಶ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಹೋಗಿ ಕುಸಿದು ಬಿದ್ದಿದ್ದಾನೆ. ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಬೌರಿಂಗ್ ಆಸ್ಪತ್ರೆಯಲ್ಲಿ ರಾತ್ರಿ 10.30ರ ಸುಮಾರಿಗೆ ಮೃತಪಟ್ಟಿದ್ದಾನೆ.

ಘಟನೆಗೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಬಾರ್‍ನಲ್ಲಿ ಗಲಾಟೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆರ್‍ಟಿ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments