ಮಕ್ಕಳೆದುರೇ ಪತ್ನಿಯನ್ನು ಇರಿದು ಕೊಂದು ಪೊಲೀಸರಿಗೆ ಶರಣಾದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.19- ಹೆಂಡತಿ ಮೇಲೆ ಅನುಮಾನ ಪಟ್ಟ ಪತಿರಾಯ ತನ್ನ ಮೂವರು ಮಕ್ಕಳೆದುರೇ ಪತ್ನಿಯ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಆಟೋ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸವದತ್ತಿ ತಾಲೂಕು ರಾಮಾಪುರ ತಾಂಡಾ ನಿವಾಸಿ ಸಕ್ಕುಬಾಯಿ ಪುಂಡಲೀಕ ಲಮಾನಿ(35) ಎಂಬಾಕೆ ಕೊಲೆಗೀಡಾಗಿಡಾದ ದುರ್ದೈವಿ. ಈಕೆಯ ಪತಿ ಪುಂಡಲೀಕ ಹಣಮಂತ ಲಮಾನಿ ಎಂಬಾತ ಕೊಲೆ ಮಾಡಿ ಮಾಳಮಾರುತಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಕಳೆದ ತಿಂಗಳ ಹಿಂದೆ ಮನೆಯಲ್ಲಿ ಜಗಳವಾದ ಕಾರಣ ಸಕ್ಕುಬಾಯಿ ತವರು ಮನೆಗೆ ಹೋಗಿದ್ದಳು. ಹಿರಿಯರ ಸಮ್ಮುಖ ಹೆಂಡತಿ ಜೊತೆಗೆ ಜಗಳ ಮಾಡುವುದಿಲ್ಲ ಎಂದು ಪತಿ ಪುಂಡಲೀಕ ಮಾತು ಕೊಟ್ಟು ಬೆಳಗಾವಿಗೆ ಕರೆ ತಂದಿದ್ದ. ನಿನ್ನೆ ರಾತ್ರಿ ಮನೆಗೆ ಬರುತ್ತಿದ್ದಂತೆ ತನ್ನ ಮೂವರು ಮಕ್ಕಳೆದುರೇ ಕೊಲೆ ಮಾಡಿ, ಬಿಡಿಸಲು ಬಂದ ಮಗಳ ಕೈಗೂ ಗಾಯವಾಗಿದೆ.

ವೃತ್ತಿಯಲ್ಲಿ ಆಟೋ ಚಾಲಕನಾದ ಆರೋಪಿ ಪುಂಡಲೀಕ, ಹತ್ಯೆ ಮಾಡಿದ ನಂತರ ಆಟೋದಲ್ಲಿ ಠಾಣೆಗೆ ಹೋಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಹೇಳಿ ಶರಣಾಗಿದ್ದಾನೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Facebook Comments