ಬೆಂಗಳೂರಿನಲ್ಲಿ ಡಬಲ್ ಮರ್ಡರ್, ಬೆಚ್ಚಿಬಿದ್ದ ಮಾರುಕಟ್ಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 15- ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ವ್ಯಾಪಾರಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರಲ್ಲಿ ನಡೆದಿದೆ. ನಿಂಬೆಹಣ್ಣು ವ್ಯಾಪಾರಿಯನ್ನು ನಗರದ ಕೆ.ಆರ್.ಮಾರ್ಕೆಟ್‍ನಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾತ್ರಿ ನಡೆದಿದೆ.

ಹಳೆಗುಡ್ಡದಹಳ್ಳಿ ನಿವಾಸಿ ಭರತ್(32) ಕೊಲೆಯಾದ ನಿಂಬೆಹಣ್ಣು ವ್ಯಾಪಾರಿ. ಹಳೆದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್.ಮಾರ್ಕೆಟ್‍ನಲ್ಲಿ ಹಣ್ಣಿನ ವ್ಯಾಪಾರ ಮಾಡುವ ಶರವಣ, ಈತನ ಅಣ್ಣ ವೆಂಕಟೇಶ್ ಮತ್ತು ಮೂವರು ಸೇರಿಕೊಂಡು ಭರತ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸಿಟಿ ಮಾರ್ಕೆಟ್ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ರಾತ್ರಿ ಸುಮಾರು 8.30ರ ಸಮಯದಲ್ಲಿ ಭರತ್ ತನ್ನ ಪಲ್ಸರ್ ಮೋಟಾರ್ ಬೈಕ್‍ನಲ್ಲಿ ಕೆ.ಆರ್.ಮಾರ್ಕೆಟ್‍ಗೆ ಬಂದು ಬೈಕ್ ನಿಲ್ಲಿಸಿ ಮಾರ್ಕೆಟ್ ಪೂರ್ವ ಗೇಟ್‍ನ ಮೆಟ್ಟಿಲುಗಳ ಬಳಿ ಹೋಗುತ್ತಿರುವಾಗ ಶರವಣ, ಈತನ ಅಣ್ಣ ವೆಂಕಟೇಶ್ ಹಾಗೂ ಇತರ ಮೂವರು ಸೇರಿಕೊಂಡು ಜಗಳ ತೆಗೆದು, ಮಚ್ಚು ಮತ್ತು ಲಾಂಗ್‍ಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಭರತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.  ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಮೀನಿನ ವ್ಯಾಪಾರಿಗೆ ಇರಿದು ಕೊಲೆ: ಮನೆಗೆ ನುಗ್ಗಿ ಮೀನಿನ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ರೋಷನ್‍ನಗರದ ನಿವಾಸಿ ಝರಾರ್(38) ಕೊಲೆಯಾದ ಮೀನಿನ ವ್ಯಾಪಾರಿ. ಹೆಣ್ಣಿನ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಡಿ.ಜಿ.ಹಳ್ಳಿ ಠಾಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೀನು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಝರಾರ್ ಅವರ ಎದುರು ಮನೆಯಲ್ಲಿ ಆರೋಪಿ ಇಷಾಕ್ ಮನೆಯಿದೆ. ಇವರಿಬ್ಬರ ನಡುವೆ ಕೆಲ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು.

ಬೆಳಗಿನ ಜಾವ 4.30ರ ಸುಮಾರಿನಲ್ಲಿ ಇಷಾಕ್ ಮತ್ತು ಅವನ ಸಹಚರರು  ಝರಾರ್ ಮನೆಗೆ ನುಗ್ಗಿ ಚಾಕುವಿನಿಂದ ಮನಬಂದಂತೆ ಹೊಟ್ಟೆ, ತಲೆ ಇನ್ನಿತೆರೆಡೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

Facebook Comments