ರಜೆ ಮೇಲೆ ಬಂದಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಮಾ.23- ಚಿಕ್ಕಬಳ್ಳಾಪುರ ತಾಲೂಕಿನ ಅವುಲ ನಾಗೇನಹಳ್ಳಿ ಗ್ರಾಮದ ಬಳಿಯ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ನಡೆದಿದೆ. ಬೆಂಗಳೂರು ನಗರ ಜಿಲ್ಲಾಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎ.ಸಿ.ರಾಮಾಂಜನೇಯ ಕೊಲೆಯಾದ ದುರ್ದೈವಿ.

ಈ ಹಿಂದೆ ರಾಮಾಂಜನೇಯ ಅರೂರು, ಪೆರೇಸಂದ್ರ, ಬಾಗೇಪಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಿದ್ದರು. ಹಾಲಿ ಬೆಂಗಳೂರು ನಗರ ಜಿಲ್ಲಾಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ರಜೆ ಕಳೆಯಲು ಬಂದಿದ್ದರು: ರಜೆ ಇದ್ದ ಕಾರಣಕ್ಕೆ ತಮ್ಮ ಸ್ವಗ್ರಾಮ ಆವುಲನಾಗೇನಹಳ್ಳಿಗೆ ಬಂದಿದ್ದ ಅವರು ನಿನ್ನೆ ಪತ್ನಿ ಮಂಜುಳಮ್ಮ ಜೊತೆ ಜಮೀನು ಬಳಿ ಹೋಗಿದ್ದರು.

ಆಗ ಗಲಾಟೆ ನಡೆದಿದ್ದು ಒಂದು ಗುಂಪು ಮಚ್ಚಿನಿಂದ ರಾಮಾಂಜನೇಯ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ್ದಾರೆ. ದಾಳಿಯಿಂದ ತೀವ್ರ ಗಾಯಗೊಂಡ ಅವರಿಬ್ಬರನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆಯೇ ರಾಮಾಂಜನೇಯ ಮೃತಪಟ್ಟಿದ್ದಾರೆ. ಅವರ ಪತ್ನಿ ಮಂಜುಳಾ ಅವರ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ದಾಖಲಿಸಲಾಗಿದೆ ಎಂದುಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಅವುಲನಾಗೇನಹಳ್ಳಿ ಗ್ರಾಮದಲ್ಲಿ ಕೆಲವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Facebook Comments