ಕೇವಲ 500 ರೂಪಾಯಿಗಾಗಿ ಬಿತ್ತು ಹೆಣ..!

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಏ.1- ಹಣಕಾಸಿನ ವಿಚಾರವಾಗಿ ಗುಂಪೊಂದು ಜಗಳವಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಯುವಕನ ಜತೆ ಮಾತಿನ ಚಕಮಕಿ ನಡೆದು ಆತನಿಗೆ ಡ್ರ್ಯಾಗರ್‍ನಿಂದ ಇರಿದು ಕೊಲೆ ಮಾಡಿರುವ ಘಟನೆ ಹಲಗೂರುಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ದಳವಾಯಿ ಕೋಡಿಹಳ್ಳಿಯ ಮಧು (30) ಕೊಲೆಯಾದ ಯುವಕ.

ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದ ರಲ್ಲಿ ಉದ್ಯೋಗದಲ್ಲಿದ್ದ ಮಧು ಊರಹಬ್ಬದ ನಿಮಿತ್ತ ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದನು.ನಿನ್ನೆ ತಡರಾತ್ರಿ ಮಧು ಹಬ್ಬದ ಊಟ ಮಾಡಿ ಕಾಲ ಕಳೆಯಲೆಂದು ಊರಿನ ಹೊರವಲಯದಲ್ಲಿ ಇಸ್ಪೀಟ್ ಆಡಲು ಹೋಗಿದ್ದನು.

ಈತ ಹೋದಾಗ ಒಂದು ಗುಂಪು ಇಸ್ಪೀಟ್ ಆಡುತ್ತಿತ್ತು. ಆ ಸಂದರ್ಭದಲ್ಲಿ ಗುಂಪಿನಲ್ಲಿದ್ದ ನಂದೀಶ್, ಸಾಗರ್, ಮುತ್ತು, ಪ್ರಮೋದ್, ಕಾಂತರಾಜ್ 500ರೂ.ಗಾಗಿ ಜಗಳವಾಡುತ್ತಿ ದ್ದರು. ಜಗಳ ಬಿಡಿಸಲು ಮಧು ಮಧ್ಯ ಪ್ರವೇಶಿಸಿದ್ದಾನೆ. ಆ ಸಂದರ್ಭದಲ್ಲಿ ಈ ಐದೂ ಮಂದಿ ಸೇರಿಕೊಂಡು ಮಧು ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಒಂದು ಹಂತದಲ್ಲಿ ಗುಂಪಿನಲ್ಲಿದ್ದವರು ಡ್ರ್ಯಾಗರ್‍ನಿಂದ ಮಧುಗೆ ಇರಿದು ಪರಾರಿಯಾಗಿದ್ದಾರೆ.

ತಕ್ಷಣ ಗಂಭೀರ ಗಾಯಗೊಂಡಿದ್ದ ಮಧುನನ್ನು ಕೆಎಂ ದೊಡ್ಡಿಯ ಮಾದೇಗೌಡ ಆಸ್ಪತ್ರೆಗೆ ಕರೆದೊಯ್ಯು ತ್ತಿದ್ದಾಗ ತೀವ್ರ ರಕ್ತಸ್ರಾವದಿಂದಾಗಿ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸರ್ಕಲ್ ಇನ್‍ಸ್ಪೆಕ್ಟರ್ ಧನರಾಜ್, ಡಿವೈಎಸ್‍ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಐದು ಮಂದಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬಾಲ ಬಿಚ್ಚುತ್ತಿರುವ ಪುಡಿರೌಡಿಗಳು: ಮಳವಳ್ಳಿ ಪಟ್ಟಣದಲ್ಲಿ ಪುಡಿರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ಸಣ್ಣಪುಟ್ಟ ವಿಷಯಕ್ಕೂ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದಾರೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂಟಿಯಾಗಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುವುದು, ಅಂಗಡಿಗಳಲ್ಲಿ ರೋಲ್‍ಕಾಲ್ ಮಾಡುವುದು ಮಾಡುತ್ತಿದ್ದಾರೆ. ಅವರ ಕೈಗೆ ಹಣ ಸಿಗುತ್ತಿದ್ದಂತೆ ಇಸ್ಪೀಟ್, ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ವಿನಾಕಾರಣ ಜಗಳವಾಡಿ ಕೈ ಕೈ ಮಿಲಾಯಿಸುತ್ತಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ಈಗಲಾದರೂಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.

Facebook Comments