ರೌಡಿಗಳಿಂದಲೇ ಸ್ನೇಹಿತನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25- ತಮ್ಮ ಸ್ನೇಹಿತನನ್ನು ರೌಡಿಗಳೇ ಚಾಕುವಿನಿಂದ ಇರಿದು ಕೊಲೆ ಮಾಡಿ ರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಗೊರಗುಂಟೆಪಾಳ್ಯ ನಿವಾಸಿ ವಿಜಯ್ ಅಲಿಯಾಸ್ ವಿಜಿ (29) ಸ್ನೇಹಿತರಿಂದಲೇ ಕೊಲೆಯಾದ ದುರ್ದೈವಿ.

ರಾತ್ರಿ ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಊಟ ಮಾಡಲೆಂದು ವಿಜಯ್ ಹೊಟೇಲ್‍ಗೆ ಕಾರಿನಲ್ಲಿ ತೆರಳಿದ್ದನು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಕಾರಿನಲ್ಲೇ ಸ್ನೇಹಿತರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಚಾಕುವಿನಿಂದ ವಿಜಯ್ ಕುತ್ತಿಗೆಗೆ ಇರಿದಿದ್ದಾರೆ.

ಇವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿಜಯ್ ಕಾರಿನಿಂದ ಇಳಿದು ಓಡುತ್ತಿದ್ದಾಗ ಯಶವಂತಪುರ ಮಸೀದಿ ಬಳಿಯ ಬಜಾಜ್ ಸರ್ಕಲ್ ಸಮೀಪ ಸ್ನೇಹಿತರು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಕುತ್ತಿಗೆಗೆ ಬಲವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಯಶವಂತಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದಾರೆ.  ಈ ಸಂಬಂಧ ಯಶವಂತಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments