ಬಿಬಿಎಂಪಿ ಸದಸ್ಯನ ಅಣ್ಣನ ಮಗನ ಬರ್ಬರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ರೊಬ್ಬರ ಅಣ್ಣನ ಮಗನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾತ್ರಿ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವ್ಯವಹಾರದ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಅಂಜನಾಪುರದ (196ನೆ ವಾರ್ಡ್) ಪಾಲಿಕೆ ಸದಸ್ಯ ಸೋಮಶೇಖರ್ ಅವರ ಅಣ್ಣನ ಮಗ ವಿನೋದ್ (32) ಕೊಲೆಯಾದ ದುರ್ದೈವಿ.

ವಿನೋದ್ ನಿನ್ನೆ ತಾತಗುಣಿ ಸಮೀಪವಿರುವ ಅಕ್ಕನ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ರಾತ್ರಿ 8.30ರ ಸುಮಾರಿನಲ್ಲಿ ಬೈಕ್‍ನಲ್ಲಿ ಹಿಂಬಾಲಿಸಿ ಕೊಂಡು ಬಂದ ದುಷ್ಕರ್ಮಿಗಳು ಏಕಾಏಕಿ ಕಾರನ್ನು ಅಡ್ಡಗಟ್ಟಿ ಮಚ್ಚಿನಿಂದ ತಲೆ ಹಾಗೂ ಇನ್ನಿತರ ಭಾಗಗಳಿಗೆ ಬಲವಾಗಿ ಹೊಡೆದು ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ವಿನೋದ್ ರಿಯಲ್ ಎಸ್ಟೇಟ್ ಜೊತೆಗೆ ಇಟ್ಟಿಗೆ ಹಾಗೂ ಜಲ್ಲಿ ಕ್ರಷರ್ ವ್ಯವಹಾರ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿದ್ದು ಒಂದು ಮಗುವಿದೆ. ಇತ್ತೀಚೆಗಷ್ಟೇ ದುಬಾರಿ ವೆಚ್ಚದಲ್ಲಿ ಮನೆ ಕಟ್ಟಿಸಿದ್ದರು.

ಪ್ರಭಾವಿಯಾಗಿ ಬೆಳೆಯುತ್ತಿದ್ದ ವಿನೋದ್ ಅವರ ವ್ಯವಹಾರ ಸಹಿಸದ ಪರಿಚಯಸ್ಥರೇ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು,

ಈ ನಿಟ್ಟಿನಲ್ಲಿ ಪೊಲೀಸರು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.  ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Facebook Comments