ಬೆಂಗಳೂರಲ್ಲಿ ಚಾಕುವಿನಿಂದ ಇರಿದು ಯುವನಕ ಕೊಲೆ
ಬೆಂಗಳೂರು, ನ.29- ಯುವಕ ನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾತ್ರಿ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗೊಂಡನಹಳ್ಳಿ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಅಬ್ದುಲ್ ಸಾಹಿಲ್ (22) ಕೊಲೆಯಾದ ಯುವಕ. ನಿನ್ನೆ ರಾತ್ರಿ ಸುಮಾರು 12 ರಿಂದ 1 ಗಂಟೆ ಸಮಯದಲ್ಲಿ ಗಂಗೊಂಡನಹಳ್ಳಿಯ ಮಸೀದಿ ಬಳಿ ನಾಲ್ಕೈದು ಮಂದಿ ಹುಡುಗರು ಸೇರಿಕೊಂಡು ಅಬ್ದುಲ್ ಸಾಹಿಲ್ನೊಂದಿಗೆ ಜಗಳ ತೆಗೆದು ಚಾಕುವಿನಿಂದ ಆತನ ಹೊಟ್ಟೆ, ಸೊಂಟ ಮುಂತಾದ ಕಡೆ ಇರಿದಿದ್ದಾರೆ.
ತೀವ್ರ ಗಾಯಗೊಂಡಿದ್ದ ಸಾಹಿಲ್ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸದ್ಯಕ್ಕೆ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹಣಕಾಸು ವಿಚಾರದಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚಂದ್ರಾಲೇಔಟ್ ಠಾಣೆ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಗಂಗೊಂಡನಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.