ಮದ್ಯ ಕೊಡದಿದ್ದಕ್ಕೆ ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಕೊಂದ ದಂಪತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಜೂ.14- ಕುಡಿಯಲು ಮದ್ಯ ನೀಡದಿದ್ದಕ್ಕೆ ಗಂಡ-ಹೆಂಡತಿ ಸೇರಿಕೊಂಡು ಮಲಗಿದ್ದ ವ್ಯಕ್ತಿಯ ಮೇಲೆ ಸೈಜು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹೊಸೂರು ಹೋಬಳಿ ಕೇಂದ್ರದ ಕೊಟಾಲದಿನ್ನೆ ವೃತ್ತದ ಬಳಿ ಜರುಗಿದೆ.

ಯಲ್ಲಪ್ಪ(58) ಕೊಲೆಯಾದ ವ್ಯಕ್ತಿ. ಮೂಲತಃ ಅನಂತಪುರ ನಿವಾಸಿಯಾಗಿದ್ದ ಈತ ಅಲ್ಲಿಂದ ವಲಸೆ ಬಂದು ಕೋಟಾಲದಿನ್ನೆ ವೃತ್ತದ ಬಳಿ ಹಂದಿ ಮಾಂಸ ಮಾರಾಟ ಮಾಡಿಕೊಂಡಿದ್ದ. ರವಿ ಮತ್ತು ಪತ್ನಿ ಸೌಂದರ್ಯ ಕೊಲೆ ಮಾಡಿದ್ದು, ಇವರಿಬ್ಬರು ಯಲ್ಲಪ್ಪನ ಪಕ್ಕದ ಮನೆಯಲ್ಲಿ ವಾಸವಿದ್ದಾರೆ.

ಕೊಲೆಯಾದ ವ್ಯಕ್ತಿ ಯಲ್ಲಪ್ಪ ಇತ್ತೀಚೆಗೆ ಆರ್ಥಿಕವಾಗಿ ಏಳಿಗೆ ಕಂಡಿದ್ದು, ಬಡ್ಡಿ ವ್ಯವಹಾರ ಸಹ ಮಾಡಿಕೊಂಡಿದ್ದ ಎನ್ನಲಾಗಿದೆ. ಮೊನ್ನೆ ಸಂಜೆ ಮದ್ಯ ಕೊಡುವಂತೆ ಅಲೆಮಾರಿ ಜನಾಂಗದ ಚಿಂದಿ ಆಯುವ ದಂಪತಿ ಕೇಳಿದ್ದಾರೆ.

ಆಗ ಯಲ್ಲಪ್ಪ ನಿರಾಕರಿಸಿದ್ದಕ್ಕೆ ಆತನೊಂದಿಗೆ ಜಗಳವಾಡಿದ್ದಾರೆ. ನಂತರ ತಡರಾತ್ರಿ ಅದೇ ದ್ವೇಷದ ಹಿನ್ನೆಲೆಯಲ್ಲಿ ಮನೆಯ ಹೊರಗಡೆ ಮಲಗಿದ್ದ ಯಲ್ಲಪ್ಪನ ಮೇಲೆ ಸೈಜು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಏನೂ ಅರಿಯದವರಂತೆ ಮನೆಯಲ್ಲಿ ಮಲಗಿದ್ದಾರೆ.

ನಿನ್ನೆ ವಿಷಯ ಗೊತ್ತಾಗಿದೆ. ಎಸ್‍ಪಿ ಜಿ.ಕೆ.ಮಿಥುನ್ ಕುಮಾರ್, ಸಿಪಿಐ ಎಸ್.ರವಿ, ಎಸ್‍ಐ ಅವಿನಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಚಿಂದಿ ಆಯುವ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾವೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

Facebook Comments

Sri Raghav

Admin