ಮಲ್ಲೇಶ್ವರಂನಲ್ಲಿ ಮರ್ಡರ್, ರೌಡಿಗಳ ಪುಂಡಾಟಕ್ಕೆ ಬಲಿಯಾದ ಅಮಾಯಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.18-ನಗರದಲ್ಲಿ ರೌಡಿಗಳ ಪುಂಡಾಟಕ್ಕೆ ಅಮಾಯಕ ಯುವಕನೊಬ್ಬ ಕೊಲೆಯಾಗಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್ ನಿವಾಸಿ ಗಣೇಶ(35) ಕೊಲೆಯಾಗಿರುವ ಯುವಕ. ಘಟನೆಯಲ್ಲಿ ಶ್ರೀನಿವಾಸ್ ಎಂಬುವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಗಣೇಶ ಮೋಟಾರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.

ರಾತ್ರಿ 11 ಗಂಟೆ ಸುಮಾರಿನಲ್ಲಿ ಮಲ್ಲೇಶ್ವರಂ 8ನೇ ಕ್ರಾಸ್‍ನ ಹೋಟೆಲ್‍ವೊಂದರ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಆಗ ಅದೇ ರಸ್ತೆಯಲ್ಲಿ ಒಂದೇ ಬೈಕ್‍ನಲ್ಲಿ ಬಂದ ಮೂವರು ರೌಡಿಗಳು ಏಕಾಏಕಿ ಗಣೇಶ್ ಮೇಲೆ ಲಾಂಗ್ ಬೀಸಿದ್ದಾರೆ.

ಈ ವೇಳೆ ತಪ್ಪಿಸಿಕೊಳ್ಳಲು ಗಣೇಶ ಓಡಿದರಾದರೂ ಬಿಡದೆ ಅಟ್ಟಾಡಿಸಿಕೊಂಡು ಲಾಂಗ್‍ನಿಂದ ಕುತ್ತಿಗೆಗೆ ಬಲವಾಗಿ ಬೀಸಿದ್ದರಿಂದ ಕುಸಿದುಬಿದ್ದು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.  ಇಷ್ಟಕ್ಕೆ ಸುಮ್ಮನಾಗದ ರೌಡಿಗಳು, ಕಾಂಡಿಮೆಂಟ್ ಅಂಗಡಿ ಬಾಗಿಲು ಹಾಕಿ ನಿಂತಿದ್ದ ಶ್ರೀನಿವಾಸ್ ಎಂಬುವರ ಮೇಲೂ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದಾಗಿ ಶ್ರೀನಿವಾಸ್ ಅವರ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ವೈಯಾಲಿ ಕಾವಲ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ಏರಿಯಾದಲ್ಲಿ ರೌಡಿಗಳ ಗುಂಪು ರಾತ್ರಿ ಲಾಂಗ್ ಹಿಡಿದು ಓಡಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ. ಯಾವ ಕಾರಣಕ್ಕಾಗಿ ಈ ಯುವಕನನ್ನು ಯಾರು ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin