ಸುಳಿವು ಕೊಟ್ಟ 6 ವರ್ಷದ ಬಾಲಕ, 3 ತಿಂಗಳ ನಂತರ ಕೊಲೆ ರಹಸ್ಯ ಬೇದಿಸಿದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಡಿ.3- ಮೂರು ತಿಂಗಳ ನಂತರ ಕೊಲೆ ರಹಸ್ಯ ಬಾಯಿಬಿಟ್ಟ ಬಾಲಕನ ಹೇಳಿಕೆ ಆಧರಿಸಿ ಮಹಿಳೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆನೇಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ವ್ಯಾಪ್ತಿಯ ಚಿನ್ನಯ್ಯನಪಾಳ್ಯದ ನಿವಾಸಿ ದೇವರಾಜು ಎಂಬುವರ ಪತ್ನಿ ಸುಮಲತಾ ಸೆಪ್ಟೆಂಬರ್ 18ರಂದು ಮೃತಪಟ್ಟಿದ್ದರು.

ಮನೆಯವರೆಲ್ಲ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿದು ಅಂತ್ಯಸಂಸ್ಕಾರವನ್ನೂ ಸಹ ನೆರವೇರಿಸಿದ್ದರು. ಆದರೆ, ಸುಮಲತಾ ಅವರ ಆರು ವರ್ಷದ ಮಗ ಅಮ್ಮನನ್ನು ವೆಂಕಟೇಶ್ ಸಾಯಿಸಿದನೆಂದು ಹೇಳಿದ್ದಾನೆ. ಮಗನ ಮಾತನ್ನು ಆಲಿಸಿದ ಅಪ್ಪ ದೇವರಾಜು ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಆರು ವರ್ಷದ ಬಾಲಕನನ್ನು ಮಾತನಾಡಿಸಿದಾಗ ನಮ್ಮ ಮನೆಗೆ ವೆಂಕಟೇಶ್ ಬರುತ್ತಿದ್ದ. ಅವನು ಸೀರೆಯಿಂದ ಅಮ್ಮನನ್ನು ಸಾಯಿಸಿದ ಎಂದು ಹೇಳಿದ್ದಾನೆ. ಬಾಲಕನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನೆರೆಹೊರೆಯವರನ್ನು ವಿಚಾರಿಸಿ ಇವರ ಮನೆಗೆ ಬರುತ್ತಿದ್ದ ವೆಂಕಟೇಶ್ ಬಗ್ಗೆ ಮಾಹಿತಿ ಪಡೆದು ನಂತರ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದ ಮೇಲೆ ಗುರುತುಗಳು ಪತ್ತೆಯಾಗಿವೆ.

ಈ ನಡುವೆ ಆರೋಪಿ ವೆಂಕಟೇಶ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನನ್ನ ಹಾಗೂ ಸುಮಲತಾ ನಡುವೆ ಆಂತರಿಕ ವಿಚಾರವಾಗಿ ಜಗಳ ನಡೆಯಿತು. ಆ ಸಂದರ್ಭದಲ್ಲಿ ಸೀರೆಯಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ. ಆನೇಕಲ್ ಠಾಣೆ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments