ಕುಡಿದ ಮತ್ತಲ್ಲಿ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 19- ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕೊರಟಗೆರೆ ತಾಲ್ಲೂಕು ಮಲ್ಲೇಶ್ವರ ಗ್ರಾಮದ ಗಿರೀಶ್ (29) ಕೊಲೆಯಾದ ದುರ್ದೈವಿ.

ಮಲ್ಲೇಶ್ವರ ಗ್ರಾಮದ ಗಿರೀಶ್ ಹಾಗೂ ನೆರೆಮನೆ ನಿವಾಸಿ ನಟೇಶ್ ಸ್ನೇಹಿತರಾಗಿದ್ದು, ಇಬ್ಬರಿಗೂ ಮದುವೆಯಾಗಿದೆ.ರಾತ್ರಿ 9 ಗಂಟೆ ಸುಮಾರಿನಲ್ಲಿ ಇವರಿಬ್ಬರೂ ಮದ್ಯ ಸೇವಿಸಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಬೈದಾಡಿಕೊಂಡಾಗ ಮೂರು ವರ್ಷಗಳಿಂದ ನಿನ್ನ ಪತ್ನಿ ಜೊತೆ ಸಂಬಂಧವಿಟ್ಟುಕೊಂಡಿದ್ದೇನೆ ಎಂದು ಗಿರೀಶ್ ಹೇಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ನಟೇಶ್ ನಿನ್ನನ್ನು ಮುಗಿಸುತ್ತೇನೆ ಎಂದು ಹಲ್ಲೆಗೆ ಮುಂದಾಗಿದ್ದಾನೆ.

ಇವರ ಜಗಳವನ್ನು ನೋಡಿದ ಗ್ರಾಮಸ್ಥರು ರಾತ್ರಿ 11 ಗಂಟೆ ಸಂದರ್ಭದಲ್ಲಿ ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನಟೇಶ್ ಆತ ಮನೆಗೆ ಹೋಗುವುದನ್ನೇ ಕಾಯುತ್ತಿದ್ದನು.

ಮಲ್ಲೇಶ್ವರ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಮುಂಭಾಗದಿಂದ ಇಂದು ಬೆಳಗಿನ ಜಾವ ಗಿರೀಶ್ ಮನೆಗೆ ಹೋಗುತ್ತಿದ್ದಾಗ ನಟೇಶ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಇಂದು ಬೆಳಗ್ಗೆ ದೇವಸ್ಥಾನದ ಬಳಿ ಹೋಗುತ್ತಿದ್ದ ಗ್ರಾಮಸ್ಥರು ಯಾರೋ ಕುಡಿದು ಮಲಗಿದ್ದಾರಲ್ಲಾ ಎಂದು ಹತ್ತಿರ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಯುವಕ ಕೊಲೆಯಾಗಿರುವುದು ಕಂಡು ತಕ್ಷಣ ಕೊರಟಗೆರೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸಬ್‍ಇನ್ಸ್‍ಪೆಕ್ಟರ್ ಮುತ್ತುರಾಜ್ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿ ಕೃಷ್ಣ, ಡಿವೈಎಸ್‍ಪಿ ಪ್ರವೀಣ್‍ಕುಮಾರ್, ವೃತ್ತ ನಿರೀಕ್ಷಕ ನದಾಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

# ವಿಶೇಷ ತಂಡ ರಚನೆ:
ಆರೋಪಿ ಪತ್ತೆಗಾಗಿ ವೃತ್ತ ನಿರೀಕ್ಷಕ ನದಾಫ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಆರೋಪಿ ಯಾರು ಎಂಬ ಮಾಹಿತಿ ಲಭ್ಯವಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದನ್ನು ಪತ್ತೆಹಚ್ಚಿ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಎಸ್ಪಿ ಅವರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin