ಹುಂಡಿ ಆಸೆಗೆ ಪ್ರಸಿದ್ಧ ಅರ್ಕೇಶ್ವರ ದೇವಾಲಯದ ಮೂವರು ಅರ್ಚಕರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಸೆ.11- ಪ್ರಸಿದ್ಧ ಅರ್ಕೇಶ್ವರ ದೇವಾಲಯದಲ್ಲಿನ ಹುಂಡಿ ಆಸೆಗೆ ಮೂವರು ಅರ್ಚಕರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಬೆಳಗ್ಗೆ ಏಳುತ್ತಲೇ ಗ್ರಾಮದಲ್ಲಿ ಮೂವರು ಅರ್ಚಕರ ಕೊಲೆಯಾಗಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿನ ನಿವಾಸಿಗಳು ದೇವಾಲಯದ ಬಳಿ ಜಮಾಯಿಸಿದ್ದರು.

ಮಂಡ್ಯದ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಹಾಗೂ ಸೆಕ್ಯೂರಿಟಿ ಗಾರ್ಡ್‍ಗಳಾಗಿ ಕೆಲಸ ಮಾಡುತ್ತಿದ್ದ ಗಣೇಶ (55), ಪ್ರಕಾಶ (58), ಆನಂದ್ (40) ಕೊಲೆಯಾದ ದುರ್ದೈವಿಗಳು. ಈ ಮೂವರೂ ದೇವಾಲಯದಲ್ಲಿ ಬೆಳಗ್ಗೆ ಅರ್ಚಕ ವೃತ್ತಿ ಮಾಡುತ್ತ, ರಾತ್ರಿ ಸೆಕ್ಯೂರಿಟಿ ಗಾರ್ಡ್‍ಗಳಾಗಿ ಕೆಲಸ ನಿರ್ವಹಿಸಿಕೊಂಡು ದೇವಾಲಯದಲ್ಲಿಯೇ ಉಳಿದುಕೊಳ್ಳುತ್ತಿದ್ದರು.

ರಾತ್ರಿ ಎಂದಿನಂತೆ ಮೂವರೂ ಊಟ ಮಾಡಿ ನಿದ್ರೆಗೆ ಜಾರಿದಾಗ ತಡರಾತ್ರಿ ದುಷ್ಕರ್ಮಿಗಳು ದೇವಾಲಯದ ಬೀಗ ಒಡೆದು ಒಳನುಗ್ಗಿ ಈ ಮೂವರ ತಲೆ ಮೇಲೆ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಿ ಹುಂಡಿ ಕದ್ದೊಯ್ದಿದ್ದಾರೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ದೇವಾಲಯದ ಬೀಗ ತೆಗೆಯಲು ಬಂದ ವ್ಯಕ್ತಿ, ದೇವಾಲಯದ ಬಾಗಿಲು ತೆರೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮೂವರು ಕೊಲೆಯಾಗಿರುವುದು ಕಂಡು ಚೀರಿಕೊಂಡು ಹೊರಗೆ ಓಡಿ ಬಂದು ಅಕ್ಕಪಕ್ಕದವರನ್ನು ಕರೆದು ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಈ ದೇವಾಲಯದ ಹುಂಡಿಯನ್ನು ಎಣಿಕೆ ಮಾಡಿರಲಿಲ್ಲ. ಇದನ್ನು ತಿಳಿದವರೇ ಈ ಕೃತ್ಯವೆಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಕಾಣಿಕೆ ಹುಂಡಿ ಜೊತೆಗೆ ಚಿನ್ನ-ಬೆಳ್ಳಿಯ ಆಭರಣವನ್ನೂ ದೋಚಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿ ವೆಂಕಟೇಶ, ಶಾಸಕ ಶ್ರೀನಿವಾಸ್, ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರ್ಚಕರ ಸಂಘದವರು ನಮಗೆ ಭದ್ರತೆ ನೀಡುವುದೂ ಸೇರಿದಂತೆ ಆರ್ಥಿಕ ನೆರವು ನೀಡುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಮನವಿ ಮಾಡಿದರು.

# ತಲಾ ಸಿಎಂ 5 ಲಕ್ಷ ಪರಿಹಾರ :
ಮಂಡ್ಯ ಜಿಲ್ಲೆ ಗುತ್ತಲಿನ ಅರರ್ಕೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮೂವರು ಅರ್ಚಕರ ಕುಟುಂಬಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಂಡ್ಯದ ಅರಕೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಗಣೇಶ್, ಪ್ರಕಾಶ್ ಮತ್ತು ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ ಎಂದು ವಿಷಾದಿಸಿದ್ದಾರೆ.

Facebook Comments