ಶೀಲ ಶಂಕಿಸಿ ಪತ್ನಿಯ ಕತ್ತು ಸೀಳಿ ಕೊಂದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಜೂ.24-ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗಿನ ಜಾವ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಕಿರುಗಾವಲು ಗ್ರಾಮದ ನಿವಾಸಿ ಸೌಮ್ಯ(28)ಕೊಲೆಯಾದ ಮಹಿಳೆಯಾಗಿದ್ದು, ಈಕೆಯ ಪತಿ ಕುಮಾರಸ್ವಾಮಿ ಪರಾರಿಯಾಗಿದ್ದಾನೆ.

ಮಳವಳ್ಳಿ ತಾಲ್ಲೂಕು ಕಲ್ಕುಣಿ ಗ್ರಾಮದ ಕುಮಾರಸ್ವಾಮಿ ಜೊತೆ ಸೌಮ್ಯ ಅವರ ಮದುವೆ 2009ರಲ್ಲಿ ನೆರವೇರಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಸೌಮ್ಯ ಅವರ ತಾಯಿ ಕಿರುಗಾವಲಿನಲ್ಲಿ ಮನೆ ಕಟ್ಟಿಸುತ್ತಿದ್ದರಿಂದ ಅಳಿಯ ಮಗಳನ್ನು ಕಿರುಗಾವಲಿನಲ್ಲೇ ವಾಸ ಮಾಡುವಂತೆ ಹೇಳಿ ಕರೆಸಿಕೊಂಡಿದ್ದರು.

ಒಂದು ವರ್ಷದಿಂದ ಸೌಮ್ಯ ದಂಪತಿ ಮಕ್ಕಳೊಂದಿಗೆ ಕಿರುಗಾವಲಿನಲ್ಲೇ ವಾಸವಾಗಿದ್ದಾರೆ. ಇತ್ತೀಚೆಗೆ ವಿನಾಕಾರಣ ಸೌಮ್ಯ ಮೇಲೆ ಪತಿ ಅನುಮಾನ ವ್ಯಕ್ತಪಡಿಸಿ ಪದೇ ಪದೆ ಜಗಳವಾಡುತ್ತಿದ್ದನು ಎನ್ನಲಾಗಿದೆ.  ಇವರ ಮಕ್ಕಳಿಬ್ಬರು ಸಮೀಪದ ಅಜ್ಜಿ ಮನೆಗೆ ಹೋಗಿ ರಾತ್ರಿ ಊಟ ಮಾಡಿ ಅಲ್ಲಿಯೇ ಉಳಿದುಕೊಂಡಿದ್ದರು.

ಈ ವೇಳೆ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳ ನಡೆದಿದೆ. ನಂತರ ಊಟ ಮಾಡಿ ಸೌಮ್ಯ ಮಲಗಿದ್ದಾರೆ. ಇಂದು ಬೆಳಗಿನಜಾವ 4 ಗಂಟೆ ಸುಮಾರಿಗೆ ಪತಿ ಕುಮಾರಸ್ವಾಮಿ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿ ನಂತರ 6 ಗಂಟೆಗೆ ಸಮೀಪದ ಅತ್ತೆ ಮನೆಗೆ ಹೋಗಿ ನಿಮ್ಮ ಮಗಳ ಮೂಗಿನಲ್ಲಿ ರಕ್ತ ಬರುತ್ತಿದೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.

ಸೌಮ್ಯ ಅವರ ತಾಯಿ ಮಗಳಿಗೆ ಏನಾಯಿತು ಎಂದು ಮನೆ ಬಳಿ ಬಂದು ನೋಡಿದಾಗ ಮಗಳು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮನೆ ಬಳಿ ಜಮಾಯಿಸಿದ್ದರು.  ಕಿರುಗಾವಲು ಠಾಣೆ ಪೊಲೀಸರು, ಸರ್ಕಲ್ ಇನ್‍ಸ್ಪೆಕ್ಟರ್ ಧರ್ಮೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments