ಜೈಕುಮಾರ್ ಕೊಲೆ ಪ್ರಕರಣ : ತಂದೆಯನ್ನು ಕೊಲ್ಲಲು ಜುಲೈನಲ್ಲೇ ಪ್ಲಾನ್ ಮಾಡಿದ್ದ ಮಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ಬಟ್ಟೆ ವ್ಯಾಪಾರಿ ಜೈಕುಮಾರ್‍ಜೈನ್ ಅವರ ಕೊಲೆಗೆ ಕಳೆದ ಜುಲೈನಲ್ಲೇ ಸಂಚು ರೂಪಿಸಲಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ತನ್ನ ಮಗಳು ಆಕೆಯ ಸ್ನೇಹಿತ ಪ್ರವೀಣ್ ಜೊತೆ ಓಡಾಡುವುದು, ಮಾತನಾಡುವುದು ಜೈಕುಮಾರ್ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆಕೆಯ ಚಟುವಟಿಕೆಗಳ ಬಗ್ಗೆ ತುಂಬಾ ನಿಗಾ ಇಟ್ಟಿದ್ದರು.

ಜೈಕುಮಾರ್ ಅವರು ಪ್ರವೀಣ್‍ನ ಜೊತೆ ಸ್ನೇಹ ಬಿಡುವಂತೆ ಹೇಳಿ ಮಗಳ ಮೇಲೆ ಎರಡು ಸಲ ಹಲ್ಲೆ ಮಾಡಿದ್ದರಂತೆ. ಮೊಬೈಲ್ ಕಿತ್ತುಕೊಂಡು ಹೊರಹೋಗದಂತೆ ಮನೆಯಲ್ಲಿಯೇ ಕೂಡಿಹಾಕಿದ್ದರಂತೆ. ಅದರಿಂದ ಆಕೆಗೆ ತಂದೆ ಮೇಲೆ ತುಂಬಾ ಕೋಪ ಬಂದಿತ್ತು.

ಒಮ್ಮೆ ದಾರಿಯಲ್ಲಿ ಸಿಕ್ಕಿದ ಪ್ರವೀಣ್‍ನಿಗೆ ತನ್ನ ಮಗಳ ಸಹವಾಸಕ್ಕೆ ಬರಬೇಡ, ಬಂದರೆ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಎಂದು ಜೈಕುಮಾರ್ ಎಚ್ಚರಿಕೆ ನೀಡಿದ್ದರಂತೆ. ನಿನ್ನ ಜೊತೆ ಓಡಾಡುವುದು, ಮಾತನಾಡುವುದು ಬೇಡ ಎಂದು ನಮ್ಮ ತಂದೆ ನನಗೂ ಸಹ ಎಚ್ಚರಿಕೆ ನೀಡಿದ್ದಾರೆ ಎಂದು ಆಕೆ ತನ್ನ ಸ್ನೇಹಿತ ಪ್ರವೀಣ್ ಜೊತೆ ಹೇಳಿಕೊಂಡಿದ್ದಳು.

ಈ ಎಚ್ಚರಿಕೆ ನಡುವೆ ಇಬ್ಬರೂ ಭೇಟಿಯಾದ ಜುಲೈ ತಿಂಗಳಿನ ಒಂದು ದಿನ ಜೈಕುಮಾರ್ ಇದ್ದರೆ ತಮಗೆ ಕಷ್ಟ ಎಂದು ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ತಾಯಿ, ತಮ್ಮ ಪಾಂಡಿಚೇರಿಗೆ ಹೋಗುವ ಸಮಯವನ್ನೇ ಕಾಯುತ್ತಿದ್ದ ಪುತ್ರಿ ಮತ್ತು ಆಕೆಯ ಸ್ನೇಹಿತ ಪ್ರವೀಣ್ ಇಬ್ಬರೂ ಸೇರಿ ಶನಿವಾರ ರಾತ್ರಿ ಜೈಕುಮಾರ್ ಅವರನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು.

ತಮ್ಮ ಪೂರ್ವಯೋಜನೆಯಂತೆ ಹಾಲಿನಲ್ಲಿ ನಿದ್ರೆ ಮಾತ್ರೆಯನ್ನು ಹಾಕಿ ಕೊಟ್ಟು ಇರಿದು ಕೊಲೆ ಮಾಡಿ ನಂತರ ಶವವನ್ನು ಮೂಟೆ ಕಟ್ಟಿ ಹೊರಗೆ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬರಲು ಯೋಚಿಸಿದ್ದರು. ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯದಿಂದ ಆ ಯೋಚನೆಯನ್ನು ಕೈಬಿಟ್ಟಿದ್ದರು.ನಂತರ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಟಕವಾಡಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Facebook Comments