ಬಿಲ್ ಕಲೆಕ್ಟರ್ ಕತ್ತು ಕೊಯ್ದು ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಸೆ.25- ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಪ್ಪದಹಳ್ಳಿಯ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಜಯಪ್ಪ (48) ಕೊಲೆಯಾದ ದುರ್ದೈವಿ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್‍ಡಿ ಕಾವಲಿನಲ್ಲಿ ಜಯಪ್ಪ ಕುಟುಂಬ ವಾಸವಾಗಿದೆ. ಇವರ ಪತ್ನಿ ಊರಿಗೆ ತೆರಳಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ 8ಗಂಟೆ ವರೆಗೆ ಜಯಪ್ಪ ಮನೆಯಲ್ಲಿದ್ದು ನಂತರ ಮಕ್ಕಳಿಗೆ ಹೊರಗೆ ಹೋಗಿ ಬರುವುದಾಗಿ ಹೇಳಿದ್ದಾರೆ.

ಮನೆಯಲ್ಲಿದ್ದ ಮಕ್ಕಳು ಊಟ ಮಾಡಿ ಮಲಗಿದ್ದಾರೆ. ಜಯಪ್ಪ ಮನೆಗೆ ಎಷ್ಟು ಗಂಟೆಗೆ ವಾಪಾಸಾದರು ಎಂಬುದು ಗೊತ್ತಿಲ್ಲ, ಬೆಳಗಾಗುವಷ್ಟರಲ್ಲಿ ಜಯಪ್ಪನ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಜಯಪ್ಪ ಅವರ ಕುತ್ತಿಗೆ ಕೊಯ್ದು, ಭೀಕರವಾಗಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಮಕ್ಕಳು ಎದ್ದು ನೋಡಿದಾಗ ಗಾಬರಿಯಾಗಿ ಸಮೀಪದಲ್ಲಿರುವ ಸಂಬಂಧಿಕರಿಗೆ ತಿಳಿಸಿ ದ್ದಾರೆ. ಸಂಬಂಧಿಕರು ಇವರ ಮನೆಗೆ ಬಂದು ನಂತರ ಪೊಲೀಸರಿಗೆ ವಿಷಯ ತಿಳಿಸಿ ದ್ದಾರೆ. ಯಾವ ಕಾರಣಕ್ಕೆ, ಯಾರು ಕೊಲೆ ಮಾಡಿದ್ದಾರೆಂಬುದು ನಿಗೂಢವಾಗಿದೆ.

ಸುದ್ದಿ ತಿಳಿದು ಸ್ಥಳಾಕಾಗಮಿಸಿ ಹೊಳಲ್ಕೆರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಗನ ಮೇಲೆ ಸಂಶಯ:  ಮನೆಯಲ್ಲಿದ್ದ ಅಪ್ರಾಪ್ತ ಮಗನ ಮೇಲೆಯೇ ಸ್ಥಳೀಯ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ವಯಸ್ಸಿಗೂ ಮುನ್ನವೇ ಪ್ರೀತಿಯ ಬಲೆಗೆ ಬಿದ್ದಿದ್ದ 17ವರ್ಷದ ಮಗನಿಗೆ ಜಯಪ್ಪ ಬುದ್ಧಿವಾದ ಹೇಳಿದ್ದರು. ಈ ವಿಷಯವಾಗಿ ಇವರ ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳೀಯರಿಂದ ಹಲವು ಮಾಹಿತಿ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments