ನನ್ನ ಬಳಿ ಯಾವುದೇ ದಾಖಲೆಗಳಿಲ್ಲ, ಅನಗತ್ಯವಾಗಿ ನನ್ನ ಹೆಸರು ತಳುಕು ಹಾಕಬೇಡಿ : ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಕೋವಿಡ್ ನಿಯಂತ್ರಿಸಲು ಖರೀದಿಸಿದ ವೈದ್ಯಕೀಯ ಪರಿಕರಗಳಿಗೆ ಸಂಬಂಧಿಸಿದಂತೆ ನನ್ನ ಬಳಿ ಯಾವುದೇ ದಾಖಲೆಗಳಾಗಲಿ ಇಲ್ಲವೇ ಪೆನ್‍ಡ್ರೈವ್ ಇಲ್ಲ. ವಿರೋಧ ಪಕ್ಷದವರು ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದೆಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ನನ್ನ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಒಂದೂ ಸಣ್ಣ ದಾಖಲೆಯೂ ಸಹ ಇಲ್ಲ. ಪೆನ್ ಡ್ರೈವ್ ಇದೆ ಎಂಬುದು ಕೇವಲ ಕಪೋಲ ಕಲ್ಪಿತ. ಅನಗತ್ಯವಾಗಿ ನನ್ನ ಹೆಸರನ್ನು ತಳುಕು ಹಾಕಬಾರದೆಂದು ವಿರೋಧ ಪಕ್ಷದವರಿಗೆ ಕೋರಿದ್ದಾರೆ.

ಸಾರ್ವಜನಿಕ ಲೆಕ್ಕ ಸಮಿತಿ(ಪಿಎಸಿ) ಸಭೆಯ ಸದಸ್ಯನಾಗಿ ನಾನು ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ 125 ಕೋಟಿ ಅವ್ಯವಹಾರ ನಡೆದಿರುವುದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದು ನೌಕರರೊಬ್ಬರು ಹೇಳಿದ್ದರು. ಇದನ್ನು ನಾನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನನಗೆ ಕರೆ ಮಾಡಿದ ವ್ಯಕ್ತಿ ಪರಿಚಯವೂ ಇಲ್ಲ. ಮುಖವನ್ನೂ ನೋಡಿಲ್ಲ. ಕರಣದಲ್ಲಿ ಅನಗತ್ಯವಾಗಿ ವಿರೋಧ ಪಕ್ಷದ ನಾಯಕರು ಸೇರಿದಂತೆ ಕೆಲವರು ನನ್ನ ಹೆಸರನ್ನು ತಳುಕು ಹಾಕಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ. ಇನ್ನು ಮುಂದಾದರೂ ಈ ಪ್ರಕರಣದಲ್ಲಿ ನನ್ನ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಹೆಸರು ಪ್ರಕಟ ಮಾಡುವುದನ್ನು ನಿಲ್ಲಿಸಬೇಕು ಎಂದು ಕಳಕಳಿಯಾಗಿ ಮನವಿ ಮಾಡುವುದಾಗಿ ಹೇಳಿದ್ದಾರೆ.  ನನಗೆ ಸಚಿವ ಸ್ಥಾನ ಕೊಡುವುದು ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಬಿಟ್ಟ ವಿಷಯವಾಗಿದೆ. ನನಗೆ ಮಂತ್ರಿ ಪದವಿ ಕೊಡುವ ವಿಚಾರವನ್ನು ಈ ವಿಷಯದ ಜೊತೆಗೆ ತಳಕು ಹಾಕುವುದು ಬೇಡ ಎಂದು ಅವರು ಕೋರಿದ್ದಾರೆ.

Facebook Comments