ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ : ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಕಲ್ಬುರ್ಗಿ, ಮೇ 4- ಜಿಲ್ಲೆಯ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ವಿಚಾರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಕಲ್ಬುರ್ಗಿಯಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಅಕ್ರಮವಾಗಿ ಬಾಂಬೆಗೆ ಕಳುಹಿಸಲಾಗುತ್ತಿದೆ.

ಉತ್ಪಾದನಾ ಘಟಕಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಾದಾಗ ಹೈದರಾಬಾದ್‍ನಿಂದ ತರಿಸಿಕೊಳ್ಳುತ್ತಿದ್ದಾರೆ. ಆಮ್ಲಜನಕ ಪೂರೈಕೆಯನ್ನು ಯಾರು ನಿಯಂತ್ರ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಳೆದ 10 ದಿನಗಳಿಂದ ಆಮ್ಲಜನಕದ ಕೊರತೆಯಾಗಿದೆ, ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದ್ದೇನೆ. ಜಿಲ್ಲೆಗೆ ಎಷ್ಟು ಆಮ್ಲಜನಕ ಬೇಕು, ಉತ್ಪಾದನೆ ಎಷ್ಟಿದೆ, ಪೂರೈಕೆಯೆಷ್ಟು ಎಂದು ಆಡಿಟ್ ವರದಿ ಸಿದ್ಧ ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳಿ ಎಂದು ಹಲವು ಬಾರಿ ಸಲಹೆ ನೀಡಿದರು ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿರುವ ಸಂಸದ ಡಾ.ಉಮೇಶ್ ಜಾದವ್ ಅವರು, ಕಳೆದ ಎರಡು ದಿನಗಳ ಹಿಂದೆ ಆಮ್ಲಜನಕದ ಕೊರತೆ ಇತ್ತು. ಈಗ ಅದನ್ನ ಸರಿ ಪಡಿಸಿದ್ದೇವೆ. ಜಿಲ್ಲೆಯಲ್ಲಿ ಮೂರು ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಒಟ್ಟು 35 ಸಾವಿರ ಕೆಎಲ್ ಆಮ್ಲಜನಕದ ಬೇಡಿಕೆ ಇದೆ, ಅದರಲ್ಲಿ 20 ಸಾವಿರ ಕೆಎಲ್ ಪೂರೈಕೆಯಾಗುತ್ತಿದೆ. ಕೊರತೆ ಇರುವುದರನ್ನು ಹೈದರಾಬಾದ್‍ನಿಂದ ತರಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಅಫ್ಜಜಲ್‍ಪುರ ತಾಲ್ಲೂಕಿನಲ್ಲಿ ಆಮ್ಲಜನಕದ ಕೊರತೆಯಿಂದ ಯಾರು ಮೃತ ಪಟ್ಟಿಲ್ಲ. ಕೋವಿಡ್ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿತ್ತು, ವೆಂಟಿಲೆಟರ್ ಹಾಕಿದ್ದರೂ ಅವರು ಬದುಕುತ್ತಿರಲಿಲ್ಲ. ಇನ್ನೊಬ್ಬರು ಬೇರೆ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಸಾವಿಗೆ ಆಮ್ಲಜನಕದ ಕೊರತೆ ಕಾರಣ ಅಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾನಿ ಮಾತನಾಡಿ, ನಿನ್ನೆ ನಾನು ಕಲ್ಬುರ್ಗಿ ಜಿಲ್ಲೆಯಲ್ಲಿ ಸಭೆ ನಡೆಸಿದ್ದೇನೆ. ಪ್ರಿಯಾಂಕ್ ಖರ್ಗೆ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಬೇಡ ಎಂದರು.

ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ, ಸಿಲಿಂಡರ್‍ಗಳು ಹಾಗೂ ಟ್ಯಾಂಕರ್‍ಗಳ ಕೊರತೆ ಇದೆ. ಅವುಗಳನ್ನು ಬಗೆ ಹರಿಸಲು ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.

Facebook Comments

Sri Raghav

Admin