ಮಸ್ಕಿ ಚುನಾವಣಾ ಫಲಿತಾಂಶ ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.12- ಫಲಿತಾಂಶವನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಯಚೂರು ಜಿಲ್ಲೆ ಮಸ್ಕಿಯ ಬಿಜೆಪಿ ಪರಾಜಿತ ಅಭ್ಯರ್ಥಿ ಬಸವನಗೌಡ ತುರುವಿಹಾಳ ಹಿಂಪಡೆದಿದ್ದಾರೆ. ಇದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಾರಿ ಬಹುತೇಕ ಸುಗಮವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಶ್ನಿಸಿ ಬಿಜೆಪಿಯ ತುಳಸಿ ಮುನಿರಾಜು ಸಲ್ಲಿಸಿರುವ ಅರ್ಜಿಯನ್ನೂ ಹಿಂಪಡೆದರೆ ಎರಡು ಕ್ಷೇತ್ರಗಳ ಉಪಚುನಾವಣೆ ಏಕಕಾಲದಲ್ಲಿ ಜರುಗಲಿದೆ.

ಬಿಜೆಪಿ ವರಿಷ್ಠರ ಸೂಚನೆಯಂತೆ ಬಸವನಗೌಡ ತುರುವಿಹಾಳ ನಿನ್ನೆ ತಮ್ಮ ವಕೀಲರ ಮೂಲಕ ಅರ್ಜಿಯನ್ನು ಹಿಂಪಡೆದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ತುರುವಿಹಾಳ 234 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದನ್ನು ಪ್ರಶ್ನಿಸಿ ಬಸವನಗೌಡ ತರುವಿಹಾಳ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಅಲ್ಲದೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿಸಿ ವಿಜೇತರಾಗಿದ್ದರೆಂದು ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಅರ್ಜಿಯನ್ನು ಹಿಂಪಡೆಯುವಂತೆ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸೂಚನೆ ಕೊಟ್ಟಿದ್ದು, ಬಸವನಗೌಡ ತುರುಬಿಹಾಳ್‍ಗೆ ಕಾಡ(ತುಂಗಭದ್ರ) ಅಧ್ಯಕ್ಷ ಗಿರಿ ಹಾಗೂ ತುಳಸಿ ಮುನಿರಾಜುಗೆ ಪ್ರವಾಸೋದ್ಯಮ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.

ಆದರೆ ಈ ಇಬ್ಬರು ಎರಡೂ ಹುದ್ದೆಗಳನ್ನು ತಿರಸ್ಕಾರ ಮಾಡಿದ್ದರು. ಇದೀಗ ತುರುವಿಹಾಳ ತಮ್ಮ ಅರ್ಜಿಯನ್ನು ಹಿಂಪಡೆದಿರುವುದರಿಂದ ಮಸ್ಕಿಗೆ ಉಪಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.  17 ಮಂದಿ ರಾಜೀನಾಮೆ ನೀಡಿದ ಶಾಸಕರಲ್ಲಿ ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಕೂಡ ಒಬ್ಬರು. ಇದೀಗ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

Facebook Comments