“ಒಕ್ಕಲಿಗರ ಸಂಘದ ಶಾಲೆ ಮುಂಭಾಗದ ರಸ್ತೆಗೆ ಮುಸುರಿ ಕೃಷ್ಣಮೂರ್ತಿ ಹೆಸರಿಡಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8- ಸುಂಕದಕಟ್ಟೆ ಸಮೀಪದ ಒಕ್ಕಲಿಗರ ಸಂಘದ ಕಾಲೇಜಿನಿಂದ ಜ್ಞಾನಜ್ಯೋತಿನಗರದವರೆಗಿನ ರಸ್ತೆಗೆ ನಟ ಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ ಎಂದು ನಾಮಕರಣ ಮಾಡುವಂತೆ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಮುಸುರಿ ಕೃಷ್ಣಮೂರ್ತಿ ಅವರ ಸ್ಮರಣಾರ್ಥ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಒಕ್ಕಲಿಗರ ಸಂಘದ ಕಾಲೇಜಿನ ಮುಂಭಾಗದ ರಸ್ತೆಗೆ ಮುಸುರಿ ಕೃಷ್ಣಮೂರ್ತಿ ಅವರ ಹೆಸರಿಡುವಂತೆ ಕೆಲ ವರ್ಷಗಳ ಹಿಂದೆಯೇ ಬಿಬಿಎಂಪಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಸ್ವತಃ ಶಾಸಕರಾಗಿದ್ದ ಮುನಿರತ್ನ ಅವರೇ 2014ರಲ್ಲಿ ಅಂದಿನ ಮಹಾಪೌರರಿಗೆ ಪತ್ರ ಬರೆದು ಒಕ್ಕಲಿಗರ ಸಂಘದ ಶಾಲೆಯಿಂದ ಜ್ಞಾನಜ್ಯೋತಿ ನಗರದವರೆಗಿನ ರಸ್ತೆಗೆ ಮುಸುರಿ ಕೃಷ್ಣಮೂರ್ತಿ ಅವರ ಹೆಸರಿಡುವಂತೆ ಶಿಫಾರಸು ಮಾಡಿದ್ದರು.

ಈ ಶಿಫಾರಸಿಗೆ ಪಾಲಿಕೆ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ದೊರೆತಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಈ ರಸ್ತೆಗೆ ಮುಸುರಿ ಕೃಷ್ಣಮೂರ್ತಿ ಅವರ ಹೆಸರನ್ನಿಡಲು ಸಾಧ್ಯವಾಗದಿರುವುದು ಬಿಬಿಎಂಪಿ ಅಧಿಕಾರಿಗಳ ಉದಾಸೀನ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹೀಗಾಗಿ ಈ ಕೂಡಲೇ ಒಕ್ಕಲಿಗರ ಸಂಘದ ಶಾಲೆ ಮುಂಭಾಗದ ರಸ್ತೆಗೆ ನಟಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ ಎಂದು ಅಧಿಕೃತವಾಗಿ ನಾಮಕರಣ ಮಾಡುವುದಲ್ಲದೆ ಸದರಿ ರಸ್ತೆಯಲ್ಲಿ ಈ ಸಂಬಂಧದ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಎನ್.ಆರ್.ರಮೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.

Facebook Comments