ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಇನ್ನಿಲ್ಲ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 15- ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಮುಂಜಾನೆ ವಿಧಿ ವಶರಾಗಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಬುಧವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ 1.10ರಲ್ಲಿ ಕೊನೆಯುಸಿರೆಳೆದಿದ್ದಾರೆ.

ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು ಮತ್ತು ಸಂಘಟನೆಯ ಬಲವರ್ಧನೆಗೆ ಹಲವಾರು ರೂಪುರೇಷೆಗಳನ್ನು ರೂಪಿಸಿ ಜನಪರ ಕಾಳಜಿಯ ಹೋರಾಟಕ್ಕೆ ಸ್ಫೂರ್ತಿಯಾಗಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಸುಬ್ರಹ್ಮಣ್ಯದ ಪುಟ್ಟ ಹಳ್ಳಿ ನೇತಾಲದಲ್ಲಿ ಕೃಷಿ ಕುಟುಂಬದ ನೇತಾಲ ನಾರಾಯಣ ರೈ ಮತ್ತು ಸುಶೀಲ ರೈ ದಂಪತಿಯ ಪುತ್ರರಾಗಿ 2.5.1952ರಲ್ಲಿ ಜನಿಸಿದ್ದ ನೇತಾಲ ಮುತ್ತಪ್ಪ ರೈ ಬಾಲ್ಯದಿಂದಲೂ ಆಧ್ಯಾತ್ಮದ ಕಡೆ ಒಲವು ಬೆಳೆಸಿಕೊಂಡಿದ್ದರು.

ಬಾಲ್ಯದಲ್ಲಿಯೇ ಸಮಾಜದಲ್ಲಿನ ಶೋಷಣೆಗಳ ವಿರುದ್ಧ ದನಿ ಎತ್ತುತ್ತಿದ್ದ ರೈ ಬೆಳೆದಂತೆ ತಮ್ಮ ದಾಟಿಯನ್ನೇ ಬದಲಾಯಿಸಿಕೊಂಡಿದ್ದರು. ಎಲ್ಲಿ ಅನ್ಯಾಯವಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ತನ್ನ ಸ್ನೇಹಿತರ ದಂಡಿನೊಂದಿಗೆ ಬಂದು ನ್ಯಾಯ ಕೊಡಿಸುತ್ತಿದ್ದರು.

ಆದರೆ ವಿಪರ್ಯಾಸವೆಂಬಂತೆ ಅವರಿಗೆ ಕೆಲವು ಅಪರಾಧ ಜಗತ್ತಿನ ನಂಟು ತಗುಲಿ ಕರ್ನಾಟಕವನ್ನು ಬಿಟ್ಟು ದುಬೈಗೆ ತೆರಳಬೇಕಾಯಿತು. ಭೂಗತ ಲೋಕದಲ್ಲೂ ಅವರ ಹೆಸರು ಥಳುಕು ಹಾಕಿಕೊಂಡಿತ್ತು.

ಆದರೆ ಕಳೆದ 2002ರಲ್ಲಿ ದುಬೈನಲ್ಲಿ ಅವರನ್ನು ಬಂಧಿಸಿದ ನಂತರ ಭಾರತಕ್ಕೆ ಕರೆ ತಂದು ಕಾನೂನು ಪ್ರಕ್ರಿಯೆಗಳು ನಡೆದಿದ್ದವು. ಈ ವೇಳೆ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ದೃಷ್ಟಿಯಿಂದ ಜಯ ಕರ್ನಾಟಕ ಸಂಘಟನೆಯನ್ನು ಕಟ್ಟಿ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದರು.

ಯುವ ಪಡೆಯನ್ನೇ ಕಟ್ಟಿ ಶಿಕ್ಷಣ , ಪರಿಸರ ಮತ್ತು ಸಮಾಜದ ಸ್ವಾಸ್ಥ್ಯದ ಪರ ದನಿ ಎತ್ತಿ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡರು. ಕಳೆದ ನಾಲ್ಕು ವರ್ಷಗಳ ಹಿಂದೆ ಅವರ ಪತ್ನಿ ರೇಖಾ ಅವರು ನಿಧನದ ನಂತರ ರೈ ಅವರು ವಿಚಲಿತರಾಗಿದ್ದರು.

ಇದೇ ವೇಳೆ ಅವರಿಗೆ ಮಾರಕ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇಂದು ಮುಂಜಾನೆ 1.10ರಲ್ಲಿ ಅವರು ಕೊನೆಯುಸಿರೆಳೆದರು. ನಂತರ ಅವರ ಕುಟುಂಬ ಸದಸ್ಯರು , ಪುತ್ರರಾದ ರಿಕ್ಕಿ ಹಾಗೂ ರಾಖಿ , ಸೋದರಿ ಹಾಗೂ ಆಪ್ತ ವಲಯ ಜತೆಗಿದ್ದರು ಎಂದು ಹೇಳಲಾಗಿದೆ.

ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯಿಂದ ಪಾರ್ಥೀವ ಶರೀರವನ್ನು ಬಿಡದಿ ಬಳಿಯ ಅವರ ಸ್ವಗೃಹಕ್ಕೆ ತರಲಾಯಿತು. ಸಂಘಟನೆಯ ರಾಜ್ಯಾಧ್ಯಕ್ಷರಾದ ಜಗದೀಶ್ , ನಿಕಟ ಪೂರ್ವ ಅಧ್ಯಕ್ಷರಾದ ದೀಪಕ್, ಜಗದೀಶ್ ಕುಮಾರ್, ಚಂದ್ರಪ್ಪ ಸೇರಿದಂತೆ ಹಲವಾರು ಪದಾಧಿಕಾರಿಗಳು, ಅಪಾರ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

ಮಧ್ಯಾಹ್ನ 2 ಗಂಟೆ ವೇಳೆಗೆ ಬಿಡದಿಯ ಅವರ ಮನೆಯ ಸಮೀಪವೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬ ಸದಸ್ಯರು, ಕೆಲವರಿಗೆ ಮಾತ್ರ ಇಲ್ಲಿ ಆಗಮಿಸಲು ಅವಕಾಶ ನೀಡಲಾಗಿದೆ. ಕೋವಿಡ್-19ನ ನಿಯಮದಂತೆ ಅಂತ್ಯಸಂಸ್ಕಾರ ಸರಳವಾಗಿ ನಡೆಯಲಿದೆ.

ಈ ಸಂದಿಗ್ಧ ಸಂದರ್ಭದಲ್ಲೂ ಎಲ್ಲರೂ ಅಣ್ಣನ ಆತ್ಮಕ್ಕೆ ಶಾಂತಿ ಕೋರಿ ಸಹಕರಿಸಬೇಕು. ಯಾರೂ ವಿಚಲಿತರಾಗಬೇಡಿ. ಮನೆಯ ಬಳಿ ಗುಂಪು ಸೇರುವುದು ಬೇಡ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎನ್.ಜಗದೀಶ್ ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.

Facebook Comments

Sri Raghav

Admin