ವಾಸುದೇವ ಮಯ್ಯ ಬರೆದಿಟ್ಟ ಡೆತ್‍ನೋಟ್ ನಲ್ಲಿ ಏನಿದೆ..? ಯಾರ ಹೆಸರುಗಳಿವೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಬಸವನಗುಡಿಯ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‍ನ ಮಾಜಿ ಸಿಇಒ ವಾಸುದೇವಮಯ್ಯ ಅವರು ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‍ನೋಟ್ ಪತ್ತೆಯಾಗಿದ್ದು, ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್‍ನಲ್ಲಿ ವಂಚನೆ ಹೇಗಾಗಿದೆ, ಯಾರ್ಯಾರು ಭಾಗಿಯಾಗಿದ್ದಾರೆ, ಅಲ್ಲಿನ ವ್ಯವಹಾರಗಳು ಹಾಗೂ ಖಾತೆಗಳ ಬಗ್ಗೆ ಸವಿಸ್ತಾರವಾಗಿ ಬರೆದಿದ್ದ ಡೆತ್‍ನೋಟ್ ಇದೀಗ ಪೊಲೀಸರ ಕೈ ಸೇರಿದೆ.

ಚಿಕ್ಕಕಲ್ಲಸಂದ್ರ ಸಮೀಪದ ನಿವಾಸಿಯಾಗಿದ್ದ ವಾಸುದೇವಮಯ್ಯ(62) ಅವರು ನಿನ್ನೆ ಸುಬ್ರಹ್ಮಣ್ಯಪುರ ವ್ಯಾಪ್ತಿಯ ಪೂರ್ಣಪ್ರಜ್ಞಾ ಲೇಔಟ್ ಬಳಿಯ ಉತ್ತರಹಳ್ಳಿ ರಸ್ತೆಬದಿ ಕಾರನ್ನು ಪಾರ್ಕ್ ಮಾಡಿ ಕಾರಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾಹಿತಿ ಮೇರೆಗೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನು ಸಂಪೂರ್ಣ ಪರಿಶೀಲನೆ ನಡೆಸಿ ಅಲ್ಲಿ ದೊರೆತ ಡೆತ್‍ನೋಟ್‍ನ್ನು ವಶಕ್ಕೆ ಪಡೆದುಕೊಂಡು ಮುಂದಿನಕ್ರಮ ಕೈಗೊಂಡಿದ್ದಾರೆ.

ಇಂದು ಕೆಂಪೇಗೌಡ ಆಸ್ಪತ್ರೆಯಲ್ಲಿ ಮೃತರ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್‍ನಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಎಸಿಬಿ ತನಿಖೆ ನಡೆಸುತ್ತಿತ್ತು.

ಈ ನಡುವೆ ಬ್ಯಾಂಕ್‍ನಲ್ಲಿ ಸುಮಾರು 1400 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಎಸಿಬಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.  ಬಳಿಕ ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿತ್ತು. ಇದರ ಬೆನ್ನಲ್ಲೇ ವಾಸುದೇವಮಯ್ಯ ಅವರ ಆತ್ಮಹತ್ಯೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Facebook Comments