ಎಂ.ವಿ.ಜೆ. ಆಸ್ಪತ್ರೆಗೆ ಹೆಚ್ಚುವರಿ ಹತ್ತು ವೆಂಟಿಲೇಟರ್: ಸಚಿವ ಡಾ. ಕೆ.ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ಸರ್ಕಾರದ ವತಿಯಿಂದ ಎಂ.ವಿ.ಜೆ. ಆಸ್ಪತ್ರೆಗೆ 10 ವೆಂಟಿಲೇಟರ್‌ಗಳನ್ನು ಕಳುಹಿಸಿಕೊಡಲಾಗಿದ್ದು, ಹೆಚ್ಚುವರಿಯಾಗಿ ಇನ್ನೂ 10 ವೆಂಟಿಲೇಟರ್‌ಗಳನ್ನು ನೀಡಲು ಒಪ್ಪಿರುವುದಾಗಿ ಆರೋಗ್ಯ ಸಚಿವರಾದ ಡಾ. ಕೆ.ಸುಧಾಕರ್ ಅವರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಎಂ.ವಿ.ಜೆ. ಆಸ್ಪತ್ರೆಗೆ ‌ಇಂದು ವೈದ್ಯಕೀಯ ಸಚಿವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾತನಾಡಿದರು.

ಆಸ್ಪತ್ರೆಯ ಸಿಬ್ಬಂದಿ, ಆರೋಗ್ಯಾಧಿಕಾರಿಗಳು ಹಾಗೂ ವೈದ್ಯರುಗಳ ಮೂಲಕ 155 ಹಾಸಿಗೆಗಳನ್ನು ವಿಶೇಷವಾಗಿ ಸ್ಟೆಪ್‌ಡೌನ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ಸೂಚಿಸಿದರು. ಆಸ್ಪತ್ರೆಗೆ ಅವಶ್ಯವಿರುವ ಕಾನ್ಸೆನ್ಟ್ರೇಟರ್ ಗಳನ್ನು ನೀಡಲಾಗುವುದು ಎಂದರು.
ಎಂ.ವಿ.ಜೆ. ಆಸ್ಪತ್ರೆಯಲ್ಲಿ 115 ಜನರಲ್ ಹಾಸಿಗೆ ಇದ್ದು, ಅದನ್ನು ವಿಶೇಷವಾಗಿ ಹೊಸಕೋಟೆ ತಾಲ್ಲೂಕಿನ ಜನರಿಗಾಗಿ ಸ್ಟೆಪ್‌ಡೌನ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತದೆ ಎಂದು‌ ಎಂ‌.ವಿ.ಜೆ‌. ಆಸ್ಪತ್ರೆ ಯವರು ಹೇಳಿರುವುದಾಗಿ ತಿಳಿಸಿದರು.

ಕೋವಿಡ್-19 ಸೋಂಕು ದೃಢಪಟ್ಟವರು ತಡವಾಗಿ ಆಸ್ಪತ್ರೆಗೆ ಧಾವಿಸುತ್ತಿರುವ ಕಾರಣ ಸಾವಿ‌ನ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಸೋಂಕು ದೃಢಪಟ್ಟ ವರದಿ ಬಂದ 5 ಗಂಟೆಗಳ ಒಳಗಾಗಿ ಸೋಂಕಿತರಿಗೆ ಮೆಡಿಕಲ್ ಕಿಟ್‌ಅನ್ನು ತಕ್ಷಣವೇ ತಲುಪಿಸುವಂತೆ ಸೂಚಿಸಲಾಗಿದೆ ಎಂದರು.

ಬೂತ್ ಮಟ್ಟದಲ್ಲಿರುವ ಟಾಸ್ಕ್ ಫೋರ್ಸ್ ಸಮಿತಿಯು ಪ್ರತಿಯೊಂದು ಸೋಂಕಿತರ ಮನೆಗೆ ಪ್ರತಿನಿತ್ಯ ಭೇಟಿ ನೀಡಿ, ಅವರ ಸ್ಯಾಚುರೇಷನ್ ಹಾಗೂ ಅವರ ದೇಹದ ಪ್ಯಾರಾಮೀಟರ್‌ಅನ್ನು ವರದಿ ಮಾಡಬೇಕು. ಅವಶ್ಯಕತೆ ಇರುವವರನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ತಿಳಿಸಿದರು.

ಹೊಸಕೋಟೆಯ ಹಳೇ ಆಸ್ಪತ್ರೆಯಲ್ಲಿ 60 ಹಾಸಿಗೆ‌‌ಗಳಿದ್ದು, ಅದರಲ್ಲಿ 40 ಹಾಸಿಗೆಯನ್ನು ಆಕ್ಸಿಜನ್ ಬೆಡ್ ಗಳಾಗಿ ರೂಪಿಸಿದ್ದಾರೆ. ಶೇ.50 ರಷ್ಟು ಹಾಸಿಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿರಬೇಕು ಎಂಬ ಸರ್ಕಾರದ ಆದೇಶವಿದ್ದು, ಯಾವ‌ ತಾಲ್ಲೂಕಿನ ಆಸ್ಪತ್ರೆಯಲ್ಲಿ 100 ಹಾಸಿಗೆ ವ್ಯವಸ್ಥೆ ಇರುತ್ತದೆಯೋ‌, ಅಲ್ಲಿ ಶೇ. 50 ರಷ್ಟು ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಇರಬೇಕು ಎಂದು ಹೇಳಿದರು.

ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಔಷಧೀಯ ಕೊರತೆ ಇಲ್ಲ. ಈಗಾಗಲೇ ದೊಡ್ಡ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ 10 ಲಕ್ಷ ಔಷಧ ಪಡೆದು ಆಯಾ ಜಿಲ್ಲೆಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಸ್ಥಳೀಯವಾಗಿ ಔಷಧಗಳ ಕೊರತೆ ಇದ್ದಲ್ಲಿ ಜಿಲ್ಲಾಧಿಕಾರಿಗಳು ಎಸ್.ಡಿ.ಆರ್.ಎಫ್‌. ಹಣವನ್ನು ಉಪಯೋಗಿಸಿಕೊಂಡು, ತಕ್ಷಣ ಸ್ಥಳೀಯ ಮಟ್ಟದಲ್ಲಿ ಔಷಧ ಖರೀದಿ ಮಾಡಿ, ಪೂರೈಕೆ ಮಾಡಲು ಅವಕಾಶವಿದೆ. ಒಟ್ಟಾರೆ ಎಲ್ಲಾ ನಾಯಕರುಗಳು ಪಕ್ಷಾತೀತವಾಗಿ ಒಗ್ಗಟ್ಟಾಗಿ ಕೋವಿಡ್ ನಿಯಂತ್ರಣ ಮಾಡಲು‌ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

ಪೌರಾಡಳಿತ ಹಾಗೂ ಸಕ್ಕರೆ ಸಚಿವರಾದ ಎಂ.ಟಿ.ಬಿ. ನಾಗರಾಜು ಅವರು ಮಾತನಾಡಿ ಹೊಸಕೋಟೆಯಲ್ಲಿ ಎಂ.ವಿ.ಜೆ. ಎಂಬ ಒಂದು ಮೆಡಿಕಲ್ ಕಾಲೇಜು ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 40 ಬೆಡ್‌ಗಳಿದ್ದು, ಪ್ರತಿನಿತ್ಯ 250 ಸೋಂಕಿತ ಪ್ರಕರಣಗಳು ಬರುತ್ತಿದ್ದು, ನಗರ ಪ್ರದೇಶದ ಜನರನ್ನು ಇಲ್ಲಿ ದಾಖಲಿಸುವುದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕೋವಿಡ್ ಪರೀಕ್ಷೆಯನ್ನು ನಿಧಾನಿಸದೇ ತ್ವರಿತವಾಗಿ ಮಾಡುತ್ತೇವೆ. ಇನ್ನು ಮುಂದೆ ಟೆಸ್ಟಿಂಗ್‌ಅನ್ನು ಒಂದು ಅಥವಾ ಒಂದೂವರೆ ದಿನದೊಳಗೆ ಮಾಡಲು‌ ಸೂಚಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮಾತನಾಡಿ, ಎಂ.ವಿ.ಜೆ. ಮತ್ತು ಆಕಾಶ್ ಆಸ್ಪತ್ರೆ ಮೊದಲು ಶೇ. 100 ರಷ್ಟು ಬಿ.ಬಿ.ಎಂ.ಪಿ ಅಡಿಯಲ್ಲಿದ್ದು, 700 ಬೆಡ್ ಅನ್ನು ಬೆಂಗಳೂರು ಗ್ರಾಮಾಂತರಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುಳಾದೇವಿ ಅವರು ಮಾತನಾಡಿ, ಹೊಸಕೋಟೆಯಲ್ಲಿ ಎಚ್.ಡಿ. ಗೆ 274 ಇದ್ದು, ಐಸಿಯು ಜೊತೆಗೆ 15 ವೆಂಟಿಲೇಟರ್ ಇದೆ ಎಂದು ಹೇಳಿದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಎಂ.ವಿ.ಜೆ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Facebook Comments