ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರ ಕುರಿತು ಸಚಿವರ ನೇತೃತ್ವದಲ್ಲಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮೈಶುಗರ್ ಸಕ್ಕರೆ ಕಂಪೆನಿ ವಿಚಾರ ಇಂದೂ ಬಗೆಹರಿದಿಲ್ಲ. ಕಾರ್ಖಾನೆ ವಿಚಾರವಾಗಿ ಸಭೆ ಕರೆಯಲಾಗಿತ್ತು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದ್ರೆ ಖಾಸಗೀಯವರಿಗೆ ನೀಡುವ ಸಂಪುಟ ಸಭೆಯ ನಿರ್ಣಯ ಹಿಂಪಡೆಯುವಂತೆ ಜಿಲ್ಲೆಯ ಶಾಸಕರು, ರೈತ ಮುಖಂಡರು ಆಗ್ರಹಿಸಿದ್ದಾರೆ.

ಸರ್ಕಾರ ಕೇವಲ 10-12 ಕೋಟಿ ರೂ. ಕೊಟ್ಟರೆ ಸಕ್ಕರೆ ಕಾರ್ಖಾನೆ ಆರಂಭ ಮಾಡಬಹುದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕಾರ್ಖಾನೆ ನೂರಾರು ಕೋಟಿ ರೂ. ನಷ್ಟದಲ್ಲಿದೆ. ಕೇವಲ ಕಾರ್ಖಾನೆಯನ್ನು ಮಾತ್ರ ಖಾಸಗಿಯವರಿಗೆ ನೀಡಲು ತೀರ್ಮಾನ ಮಾಡಲಾಗಿದೆ.

ಕಾರ್ಖಾನೆಗೆ ಸಂಬಂಧಿಸಿದ ಇತರ ಯಾವುದೆ ಆಸ್ತಿಯನ್ನ ನೀಡುತ್ತಿಲ್ಲ ಎಂದು ಸಚಿವರು ಸಭೆಗೆ ಮಾಹಿತಿ ನೀಡಿದ್ದಾರೆ. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ. ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಆರಂಭವಾಗಬೇಕು. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ಸಭೆಯಲ್ಲಿ ಚರ್ಚಿಸಿದ ವಿಚಾರವನ್ನು ಸಿಎಂ ಗಮನಕ್ಕೆ ತರುತ್ತೇವೆ. ಸಿಎಂ ಈ ಬಗ್ಗೆ ನೀಡುವ ಸೂಚನೆಯನ್ನ ಪಾಲಿಸುತ್ತೇವೆ ಎಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಸಭೆಗೆ ತಿಳಿಸಿದ್ದಾರೆ.

ವಿಕಾಸ ಸೌಧದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಸಂಸದೆ ಸುಮಲತಾ, ಶಾಸಕರಾದ ಅನ್ನದಾನಿ, ರವೀಂದ್ರಶ್ರೀಕಂಠಯ್ಯ, ಎಂ. ಶ್ರೀನಿವಾಸ್, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿ ಗೌಡ, ಶ್ರೀಕಂಠೇಗೌಡ ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.

Facebook Comments

Sri Raghav

Admin