ಆಟೋರಿಕ್ಷಾದಲ್ಲಿ ಯುವತಿಯನ್ನು ಹೊತ್ತೊಯ್ದು ರೇಪ್ ಮಾಡಿದ್ದ ಇಬ್ಬರಿಗೆ 20 ವರ್ಷ ಶಿಕ್ಷೆ, 50,000 ದಂಡ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.29- ಆಟೋ ರಿಕ್ಷಾಗಾಗಿ ಕಾಯುತ್ತಿದ್ದ ಅಪ್ರಾಪ್ತ ಯುವತಿಯನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು ಮಾರ್ಗಮಧ್ಯೆ ಅತ್ಯಾಚಾರವೆಸಗಿದ್ದ ಇಬ್ಬರಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಗಿಡದಾರಲಹಳ್ಳಿ ನಿವಾಸಿಗಳಾದ ನಾಗರಾಜ ಅಲಿಯಾಸ್ ನಾಗ ಮತ್ತು ನಾಗರಾಜ್ ಶಿಕ್ಷೆಗೊಳಗಾದ ಆರೋಪಿಗಳು.

ಜೂ.10, 2017ರಂದು ಬೆಳಗ್ಗೆ 9.45 ಸುಮಾರಿನಲ್ಲಿ ಅಪ್ರಾಪ್ತ ಯುವತಿ ತನ್ನ ಊರಾದ ಗಿಡದಾರಲಹಳ್ಳಿ ಗ್ರಾಮಕ್ಕೆ ಹೋಗಲು ತೋವಿನಕೆರೆ ಬಸ್ ನಿಲ್ದಾಣ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗ ಆಟೋ ರಿಕ್ಷಾಗಾಗಿ ಕಾಯುತ್ತಿದ್ದರು.

ಈ ಸಂದರ್ಭದಲ್ಲಿ ತನ್ನ ಸ್ನೇಹಿತ ನಾಗನ ಜೊತೆ ಆಟೋ ಚಲಾಯಿಸಿಕೊಂಡು ಬಂದ ನಾಗರಾಜ ಯುವತಿಯನ್ನು ಗಿಡದಾರಲಹಳ್ಳಿಗೆ ಬಿಡುವುದಾಗಿ ಹತ್ತಿಸಿಕೊಂಡು ಮಾರ್ಗಮಧ್ಯೆ ಕಳ್ಳಂಬೆಳ್ಳ ವ್ಯಾಪ್ತಿಯ ಕುಪ್ಪೇನಹಳ್ಳಿ ಗ್ರಾಮದ ಗೋಮಾಳ ಜಮೀನಿನ ಬಳಿ ಆಟೋ ನಿಲ್ಲಿಸಿ ಅತ್ಯಾಚಾರವೆಸಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಈ ಪ್ರಕರಣದ ತೀವ್ರ ವಿಚಾರಣೆ ನಡೆದು ಆರೋಪಿಗಳಿಬ್ಬರು ತಪ್ಪಿತಸ್ಥರು ಎಂದು ದೃಢಪಟ್ಟ ಮೇರೆಗೆ ಇಬ್ಬರಿಗೂ 20 ವರ್ಷಗಳ ಜೈಲು ಶಿಕ್ಷೆ ಮತ್ತು ಅಪ್ರಾಪ್ತ ಯುವತಿಯ ವೈದ್ಯಕೀಯ ವೆಚ್ಚ ಮತ್ತು ಪುನರ್‍ವಸತಿ ಪೂರೈಸಲು ತಲಾ 50 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಗಾಯತ್ರಿದೇವಿಯವರು ವಾದ ಮಂಡಿಸಿದ್ದರು. ತನಿಖೆಗೆ ಹಾಗೂ ವಿಚಾರಣೆಗೆ ಸಹಕರಿಸಿದ ಎಲ್ಲರನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

Facebook Comments