ಮೈಸೂರುನಲ್ಲಿ ಜನಸ್ಪಂದನಾ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.4- ಇದೇ ಮೊದಲ ಬಾರಿಗೆ ಮೈಸೂರು ನಗರ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮಹತ್ವದ ಪ್ರಯತ್ನವೊಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರಿಂದ ಇಂದು ನಡೆಯಿತು. ನಗರದ ಜಿ.ಕೆ. ಮೈದಾನದಲ್ಲಿ ಇಂದು ಬೆಳಿಗ್ಗೆ ಬೃಹತ್ ಪೆಂಡಾಲ್‍ನಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ರಾಮದಾಸ್ ಮಾತನಾಡಿ ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ನಗರದ ನಾಗರಿಕರನ್ನು ಒಂದೆಡೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಟ್ಟಾಗಿ ಸೇರಿಸಿ ಸಮಸ್ಯೆ ಆಲಿಸಿ ಪರಿಹರಿಸುವ ಕಾರ್ಯ ಮೆಚ್ಚುವಂತಹದ್ದು, ಜನತೆ ಹಾಗೂ ಸರ್ಕಾರದ ನಡುವೆ ಬಾಂಧವ್ಯ ಹೆಚ್ಚಾಗಲಿದೆ ಎಂದು ತಿಳಿಸಿದರು.

ಹಲವು ಇಲಾಖೆಗಳಲ್ಲಿ ಜನರಿಗೆ ಉತ್ತಮ ಸ್ಪಂದನೆ ದೊರೆಯದಿರಬಹುದು ಇಲ್ಲಿ ಆ ಸಮಸ್ಯೆಯಿಲ್ಲ, ಅಧಿಕಾರಿಗಳು ಸ್ಥಳದಲ್ಲೇ ಇರುವುದರಿಂದ ಜನಪ್ರತಿನಿಧಿಗಳ ಎದುರಲ್ಲೇ ಜನರ ಸಮಸ್ಯೆಗೆ ಯಾವುದೇ ಸಬೂಬು ಹೇಳದೇ ಸ್ಪಂದಿಸಬೇಕಾಗುತ್ತದೆ ಎಂದರು.  ಶಾಸಕ ನಾಗೇಂದ್ರ ಮಾತನಾಡಿ, ನಗರಪಾಲಿಕೆ ವ್ಯಾಪ್ತಿಯ 9 ವಲಯ ಕಚೇರಿಗಳ ಅಧಿಕಾರಿಗಳು ಹಲವಾರು ವರ್ಷಗಳಿಂದ ಇಲ್ಲಿಯೇ ಜಾಂಡಾ ಊರಿದ್ದಾರೆ.

ಇಂತಹವರು ಜನರ ಸಮ್ಯಸೆಗಳಿಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ ಹಾಗಾಗಿ ಅವರನ್ನು ವರ್ಗಾವಣೆ ಮಾಡಬೇಕು ಹಲವಾರು ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವವರನ್ನು ವರ್ಗಾಯಿಸಬೇಕು ಎಂದರು. ಮೇಯರ್ ಪುಷ್ಪಲತಾ ಜಗನಾಥ್ ಸೇರಿದಂತೆ ಪಾಲಿಕೆಯ 9ವಲಯ ಅಧಿಕಾರಿಗಳು, ಹೂಡಾ ಅಧಿಕಾರಿಗಳು, ವಾಣಿವಿಲಾಸ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೂರಾರು ಮಂದಿ ನಾಗರಿಕರು ಇಂದಿನ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಗವಹಿಸಿ ತಮ್ಮ ಸಮಸ್ಯೆಗಳಾದ ನೀರು, ವಿದ್ಯುತ್, ಖಾತೆ ಮತ್ತಿತರ ವಿಷಯಕ್ಕೆ ಸಂಬಂಧಿಸಿದ ಅಹವಾಲು ಸಲ್ಲಿಸಿ ಪರಿಹಾರ ಕಂಡುಕೊಂಡರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೂಡಾ ಆಯುಕ್ತ ಕಾಂತರಾಜು, ಪಾಲಿಕೆ ಆಯುಕ್ತರಾದ ಶಿಲ್ಪನಾಗ್ ಮತ್ತಿತರರು ಉಪಸ್ಥಿತರಿದ್ದರು.  ಸಾರ್ವಜನಿಕರಿಗೆ ಜನಸ್ಪಂದನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಕುಡಿಯುವ ನೀರು, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಲಾಗಿತ್ತು.

Facebook Comments