ವೃದ್ಧೆಯರ ಸರಗಳ್ಳನಿಗೆ 8 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.1- ಸರಗಳ್ಳನೊಬ್ಬನಿಗೆ ನ್ಯಾಯಾಲಯ ಎಂಟು ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಬೆಂಗಳೂರಿನ ಮೈಲಸಂದ್ರದ ವಾಸಿ ಸೋಮಶೇಖರ ಆಚಾರಿ (26) ಶಿಕ್ಷೆಗೊಳಗಾದ ಸರಗಳ್ಳ.

ಈತ ವೃದ್ಧೆಯರನ್ನೇ ಗುರಿಯಾಗಿಸಿಕೊಂಡು ಒಂದೂವರೆ ಕೆಜಿ ತೂಕದ ಸರಗಳನ್ನು ಕಳ್ಳತನ ಮಾಡಿದ್ದ. ಈತನನ್ನು 2011ರಲ್ಲಿ ಎನ್‍ಆರ್ ಠಾಣೆ ಪೊಲೀಸರು ಬಂಧಿಸಿದ್ದರು. ಆಗ ಒಂದು ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.

ಆನಂತರ ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಸರಗಳ್ಳತನ ಹೆಚ್ಚಾಗಿ ನಡೆದಿದ್ದರ ಹಿನ್ನೆಲೆಯಲ್ಲಿ ಸಂಶಯದ ಮೇಲೆ ಸೋಮಶೇಖರ ಆಚಾರಿಯನ್ನು 2018ರಲ್ಲಿ ಈ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡರು. ಕುವೆಂಪುನಗರ ಠಾಣೆಯವರು ವಿಚಾರಣೆಗೊಳಪಡಿಸಿ ಈತನಿಂದ 600 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದರು.

ನಂತರ ಕುವೆಂಪುನಗರ ಠಾಣೆ ಪೊಲೀಸರು ಈತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ ಐದನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ.ಜೋಷಿ ಅವರು ವಾದ-ವಿವಾದ ಆಲಿಸಿ ಸೋಮಶೇಖರ ಆಚಾರಿಗೆ 8 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಅಭಿಯೋಜಕ ನಾಗಪ್ಪ ನಾಕ್‍ಮನ್ ಅವರು ವಾದ ಮಂಡಿಸಿದ್ದರು.

Facebook Comments