ದಸರಾ : 3 ಕೋಟಿ ರೂ. ವೆಚ್ಚದಲ್ಲಿ 12 ವಿಶೇಷ ರೀತಿಯ ವಿದ್ಯುತ್ ದೀಪಾಲಂಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.13- ಈ ಬಾರಿಯ ನಾಡಹಬ್ಬ ದಸರಾದಲ್ಲಿ ವಿಶೇಷ ರೀತಿಯ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದ ಮೂಡಾ ಕಚೇರಿಯಲ್ಲಿ ನಡೆದ ದಸರಾ ಸಿದ್ಧತೆ ಸಭೆಯಲ್ಲಿ ದಸರಾ ವಿದ್ಯುತ್ ದೀಪಾಲಂಕಾರದ ಫೋಸ್ಟರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 75ಕಿ.ಮೀ. ರಸ್ತೆ, 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುವುದು, ಒಟ್ಟು 3ಕೋಟಿ ರೂ. ವೆಚ್ಚದಲ್ಲಿ 12 ವಿಶೇಷ ವಿದ್ಯುತ್ ಕಲಾಕೃತಿಗಳನ್ನು ವಿನ್ಯಾಸಗೊಳಿಸಲಾಗುವುದು ಎಂದರು.

ಪ್ರವಾಸಿಗರ ಕಣ್ಮನಸೆಳೆಯುವಂತಹ ದಸರಾ ವಿನ್ಯಾಸದೊಂದಿಗೆ ದೀಪಾಲಂಕಾರ ವ್ಯವಸ್ಥೆ ರೂಪಿಸಲಾಗಿದೆ. ಸೆ. 25ರೊಳಗೆ ವಿದ್ಯುತ್‍ದೀಪಾಲಂಕಾರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಶ್ಚಿಮ ಬಂಗಾಳದ ದುರ್ಗಾದೇವಿ ಪೂಜೆಯ ಮಾದರಿ ಕಲಾಕೃತಿಗಳನ್ನು ನಗರದ ಐದು ಸ್ಥಳಗಳಲ್ಲಿ ಹಾಕಲಾಗುವುದು ಎಂದು ತಿಳಿಸಿದರು.

ದೀಪಾಲಂಕಾರದ ವ್ಯವಸ್ಥೆಗಾಗಿ 1ಲಕ್ಷ ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಹೀಗಾಗಿ ನಗರದ ರಾಜಮಾರ್ಗ ಹಾಗೂ ಅರಮನೆಯ ಸುತ್ತ-ಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ಉಳಿತಾಯದ ಉದ್ದೇಶದಿಂದ ಎಲ್‍ಇಡಿ ಬಲ್ಪ್‍ಗಳನ್ನು ಬಳಸುವಂತೆ ಸೂಚಿಸಲಾಗಿದೆ. ದೀಪಾಲಂಕಾರದ ವ್ಯವಸ್ಥೆಯನ್ನು ಈ ಬಾರಿ ದಸರಾ ಮುಕ್ತಾಯದ ನಂತರವು ಅಂದರೆ ಚಾಮುಂಡಿ ಬೆಟ್ಟದಲ್ಲಿ ತೇಫೋವ ನಡೆಯುವವರೆಗೂ ಮುಂದುವರಿಸಲಾಗುವುದು ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಶ್ರೀ ರಂಗಪಟ್ಟಣದಲ್ಲಿ 10 ಲಕ್ಷ ಹಾಗೂ ಚಾಮರಾಜನಗರದಲ್ಲಿ 15ಲಕ್ಷ ರೂ.ಗಳ ವೆಚ್ಚದಲ್ಲಿ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಈ ವೇಳೆ ಶಾಸಕ ನಾಗೇಂದ್ರ, ಜಿಲಾಧಿಕಾರಿ ಅಭಿರಾಂ ಜಿ.ಶಂಕರ್, ಸೆಸ್ಕಾ ವ್ಯವಸ್ಥಾಪಕ ಡಾ. ಎಚ್.ಎನ್.ಗೋಪಾಲಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Facebook Comments