ದಸರಾ ಮಹೋತ್ಸವದ ಪಾರಂಪರಿಕ ನಡಿಗೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.1- ದಸರಾ ಮಹೋತ್ಸವದ ಮೂರನೆ ದಿನದ ಪ್ರಯುಕ್ತ ನಗರದಲ್ಲಿ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಯಿತು. ನಗರದ ಪುರಭವನದಿಂದ ಪಾರಂಪರಿಕ ನಡಿಗೆ ಪ್ರಾರಂಭವಾಗಿ ದೊಡ್ಡ ಗಡಿಯಾರ, ಓಲ್ಡ್ ಸ್ಟ್ಯಾಚು ವೃತ್ತ, ಮೈಸೂರು ಅರಮನೆ, ಕೆ.ಆರ್.ವೃತ್ತ, ದೇವರಾಜ ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ ರಸ್ತೆ ಕಟ್ಟಡದ ಬಳಿ ಅಂತ್ಯಗೊಂಡಿತು.

ಪಾರಂಪರಿಕ ನಡಿಗೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್ ಪಾಲ್ಗೊಂಡಿದ್ದರು. ಪ್ರತಿಯೊಂದು ಪಾರಂಪರಿಕ ಕಟ್ಟಡಗಳ ಬಳಿ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಇತಿಹಾಸ ತಜ್ಞರಾದ ರಂಗರಾಜು, ಈಚನೂರು ಕುಮಾರ್ ತಿಳಿಸಿಕೊಟ್ಟರು. ಈ ಬಾರಿ ಪಾರಂಪರಿಕ ಉಡುಗೆಯನ್ನು ತೊಟ್ಟು ಅಂದರೆ ಪುರುಷರು ಪಂಚೆ, ಶಟ್, ಶಲ್ಯ ಧರಿಸಿದ್ದರೆ ಮಹಿಳೆಯರು ಸೀರೆ ಧರಿಸಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.

ನಡೆದು ಬರುವವರ ತಂಡ, ಸೈಕ್‍ನಲ್ಲಿ ಬರುವವರು ಎರಡು ತಂಡಗಳಾಗಿ ಬಂದರು. ಪಾರಂಪರಿಕ ನಡಿಗೆ ಉದ್ಘಾಟಿಸಿದ ಶಾಸಕ ರಾಮ್‍ದಾಸ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಇರುವ ಈ ಕಟ್ಟಡಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸವನ್ನು ನಾವೆಲ್ಲಾ ಮಾಡಬೇಕಿದೆ. ಹಾಗಾಗಿ ದಸರಾ ಸಂದರ್ಭದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಟೌನ್‍ಹಾಲ್ ಸೇರಿದಂತೆ ಪಾರಂಪರಿಕ ಕಟ್ಟಡಗಳ ವಾಸ್ತುಶಿಲ್ಪ, ಇತಿಹಾಸ, ವಿನ್ಯಾಸ, ಪರಂಪರೆ ನಿರ್ಮಾಣದ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸುವ ಕೆಲಸ ಈ ನಡಿಗೆಯಿಂದ ಆಗಿದೆ ಎಂದರು. ಪಾರಂಪರಿಕ ನಡಿಗೆ ಎಂದರೆ ಕೇವಲ ಕಟ್ಟಡಗಳ ಬಳಿ ನಡೆದು ಹೋಗುವುದಷ್ಟೇ ಅಲ್ಲ. ಮೊದಲ ವಿಶ್ವ ಸುಂದರಿ ಪದ್ಮಿನಿ ಅವರು ಪಾರಂಪರಿಕ ನಡಿಗೆ-ಉಡುಗೆಯನ್ನು ತೋರಿಸಿಕೊಟ್ಟಿದ್ದ. ಇದನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಈ ಬಗ್ಗೆ ವಿವರಣೆ ನೀಡಿದರು.

Facebook Comments