ಪೊಲೀಸ್ ಠಾಣೆ ಸಮೀಪವೇ ಗಂಧದ ಮರ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.22- ಕುವೆಂಪುನಗರ ಪೊಲೀಸ್ ಠಾಣೆ ಸಮೀಪದ ಮನೆ ಮುಂದೆ ಬೆಳೆದಿದ್ದ ಗಂಧದ ಮರವನ್ನು ಯಾರೋ ಕಳವು ಮಾಡಿರುವ ಘಟನೆ ರಾತ್ರಿ ನಡೆದಿದೆ. ಕುವೆಂಪುನಗರ ನಿವಾಸಿ ರಾಜಶೇಖರ್ ತಮ್ಮ ಮನೆ ಮುಂದೆ ಗಂಧದ ಮರವನ್ನು ಕಳೆದ 13 ವರ್ಷಗಳಿಂದ ಬೆಳೆಸಿದ್ದರು. ರಾತ್ರಿ ಕಳ್ಳರು ಬುಡಸಮೇತ ಕತ್ತರಿಸಿಕೊಂಡು ಹೋಗಿದ್ದಾರೆ.

ಕತ್ತರಿಸುವಾಗ ಶಬ್ಧವಾಗದಿರಲಿ ಎಂದು ಮರದ ಸುತ್ತ ಪ್ಲ್ಯಾಸ್ಟಿಕ್ ಪೈಪ್ ಅಳವಡಿಸಿ ಚಾಣಾಕ್ಷತನದಿಂದ ಮರ ಕತ್ತರಿಸಲಾಗಿದೆ. ಜತೆಗೆ ಮಳೆ ಬರುತ್ತಿದುದ್ದರಿಂದ ಶಬ್ಧ ಕೇಳದಿರಬಹುದು ಎನ್ನಲಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯ ಕೇವಲ 200 ಮೀಟರ್ ದೂರದಲ್ಲಿ ರಾಜಶೇಖರ್ ಮನೆ ಇದೆ.

ರಾತ್ರಿ ಗಂಧದ ಮರ ಕತ್ತರಿಸಿ ಸಾಗಿಸಿರುವುದು ಪೊಲೀಸರು ಸೇರಿದಂತೆ ಯಾರಿಗೂ ಗೊತ್ತಾಗದೆ ಇರುವುದು ಅನುಮಾನ ಮೂಡಿಸಿದೆ. ರಾಜಶೇಖರ್ ದೂರು ಕೊಡಲು ಕುವೆಂಪುನಗರ ಠಾಣೆಗೆ ಹೋದಾಗ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯ ಇಲಾಖೆಗೆ ದೂರು ನೀಡಿ ಹೋಗಿ ಎಂದು ಉಡಾಫೆಯಾಗಿ ಹೇಳಿದ್ದಾರೆ ಎಂದು ರಾಜಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

Facebook Comments