ಮೈಸೂರಿನಲ್ಲಿ ಯಶಸ್ವಿಯಾಗದ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಫೆ.13- ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ನಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮೈಸೂರಿನಲ್ಲಿ ಸಾರ್ವಜನಿಕರು ಸೇರಿದಂತೆ ಕನ್ನಡಪರ ಸಂಘಟನೆಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಕಂಡುಬಂದಿಲ್ಲ.

ಎಂದಿನಂತೆ ಇಂದು ನಗರ ಬಸ್‍ಗಳ ಸಂಚಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿದೆ.  ನಗರದಿಂದ ಹೊರ ಊರುಗಳಿಗೆ ತೆರಳುವ ಸಾರ್ವಜನಿಕರು ಸಹ ನಗರದ ಸಬರ್ಬನ್ ಬಸ್ ನಿಲ್ದಾಣದಿಂದ ಬಸ್‍ಗಳಲ್ಲಿ ತೆರಳಿದ್ದಾರೆ. ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳು ಹಾಗೂ ಹಾಸನ, ಗೋವಾ ತಮಿಳುನಾಡು , ಕೇರಳಕ್ಕೆ ಎಂದಿನಂತೆ ಬಸ್ ಸಂಚರಿಸಿವೆ.

ಯಾವುದೇ ರೀತಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಇಂದು ಬೆಳಗ್ಗೆ ಪರ ಊರುಗಳಿಂದ ಮೈಸೂರಿಗೆ ಆಗಮಿಸಿದವರು ಸಹ ಸುರಕ್ಷಿತವಾಗಿ ತಲುಪುವ ಸ್ಥಳಗಳನ್ನು ಸೇರಿದ್ದಾರೆ.
ಆಟೋ, ಖಾಸಗಿ ಬಸ್‍ಗಳು ಹಾಗೂ ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಎಂದಿನಂತೆ ಜನ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ.

ಮೈಸೂರು ಹೋಟೆಲ್ ಮಾಲೀಕರ ಸಂಘದವರು ಇಂದಿನ ಬಂದ್‍ಗೆ ನೈತಿಕ ಬೆಂಬಲ ಸೂಚಿಸಿದ್ದಲ್ಲದೆ ಹೋಟೆಲ್ ತೆರೆದು ವ್ಯವಹಾರ ನಡೆಸುವುದಾಗಿ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದರು. ಅದರಂತೆ ಎಲ್ಲ ಹೋಟೆಲ್‍ಗಳು ತೆರೆದಿದ್ದವು.  ಅಂಗಡಿಮುಂಗಟ್ಟುಗಳು, ಮಾಲುಗಳು, ಪೆಟ್ರೋಲ್ ಬಂಕ್,ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿದ್ದು, ಕೆಲ ಕನ್ನಡಪರ ಸಂಘಟನೆಯವರು ಬಂದ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ಬಂದ್‍ನ ಬಿಸಿ ತಗುಲಲಿಲ್ಲ. ಬಂದ್ ಆಗದೆ ಇರುವುದರಿಂದ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಿತ್ತು.  ಮೈಸೂರು ಅರಮನೆ,ಚಾಮುಂಡಿ ಬೆಟ್ಟ ಸೇರಿದಂತೆ ಸಾಂಸ್ಕøತಿಕ ನಗರಿ ಮೈಸೂರಿಗೆ ಎಂದಿನಂತೆ ಪ್ರವಾಸಿಗರು ಭೇಟಿ ನೀಡಿದ್ದರು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಯಾವುದೇ ಕನ್ನಡಪರ ಸಂಘಟನೆಗಳು ಬಂದ್‍ಗಾಗಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಬಾರದೆಂದು ಸೂಚಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

Facebook Comments