ನಂಜನಗೂಡು, ಮೈಸೂರಿನಲ್ಲಿ ಮತ್ತೆ ಕೊರೊನಾ ನಂಜಿನ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ.9- ನಂಜನಗೂಡು ಮತ್ತು ಮೈಸೂರಿನಲ್ಲಿ ಮತ್ತೆ ಕೊರೊನಾ ಆತಂಕ ಉಂಟಾಗಿದೆ.  ನಗರದ ಇಟ್ಟಿಗೆಗೂಡು ಮತ್ತು ನಂಜನಗೂಡಿನ ರಸ್ತೆಯೊಂದನ್ನು ಸೀಲ್‍ಡೌನ್ ಮಾಡಲಾಗಿದೆ.

ಜ್ಯುಬಿಲಿಯಂಟ್ ನಂತರ ಇದೀಗ ಮೈಸೂರಿಗೆ ಮತ್ತೆ ನಂಜು ಕಾಡುತ್ತಿದ್ದು, ನಗರದ ಇಟ್ಟಿಗೆಗೂಡು ಪ್ರದೇಶದ ರಸ್ತೆಯೊಂದನ್ನು ಸೀಲ್‍ಡೌನ್ ಮಾಡಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈನಿಂದ ಭಾನುವಾರ ಮೈಸೂರಿಗೆ ಬಂದಿದ್ದ 60 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ಈ ಸಂಬಂಧ ಇಟ್ಟಿಗೆಗೂಡು ಪ್ರದೇಶದ ಜ್ವಾಲಾಮುಖಿ ಸರ್ಕಲ್ ಸೀಲ್‍ಡೌನ್ ಮಾಡಲಾಗಿದೆ. ಅತ್ತೆಯ ಅನಾರೋಗ್ಯ ನಿಮಿತ್ತ ಮಗಳು ಮತ್ತು ಅಳಿಯ ಇದೇ ಮನೆಗೆ ಬಂದಿದ್ದರಿಂದ ಇವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಪಾಲಿಕೆ ವೈದ್ಯಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.

ನಂಜನಗೂಡಿನಲ್ಲಿ ಜ್ಯುಬಿಲಿಯಂಟ್ ನಂತರ ಇದೀಗ ಮುಂಬೈ ನಂಜು ಕಾಡಿದ್ದು, ಇಲ್ಲಿನ ಯುವಕನೊಬ್ಬ ವಿದ್ಯಾಭ್ಯಾಸಕ್ಕೆಂದು ಮುಂಬೈಗೆ ತೆರಳಿದ್ದು, ಜೂ.1ರಂದು ಬೆಂಗಳೂರಿಗೆ ವಾಪಸಾಗಿ 2ರಂದು ನಂಜನಗೂಡಿಗೆ ಮರಳಿದ್ದರು.

ಈತನನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಿದಾಗ ಪಾಸಿಟಿವ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಲ್ಲದೆ, ನಂಜನಗೂಡು ಪಟ್ಟಣದ ನೀಲಕಂಠನಗರ ಪ್ರದೇಶದಲ್ಲಿ ಈತ ವಾಸವಾಗಿದ್ದ ರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Facebook Comments