ಮೈಸೂರು ಜಿಲ್ಲೆಯಲ್ಲಿ 9 ಕಡೆ ಲಸಿಕೆ ನೀಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.16- ನಗರ ಹಾಗೂ ಜಿಲ್ಲೆ ಸೇರಿದಂತೆ 9 ಸ್ಥಳಗಳಲ್ಲಿ ಕೋವಿಡ್-19 ಲಸಿಕೆ ನೀಡುವ ಮಹಾ ಅಭಿಯಾನ ಪ್ರಾರಂಭವಾಯಿತು. ನಗರದ ಪಿಕೆಟಿಬಿ ಆವರಣ, ಜೆಎಸ್‍ಎಸ್ ಆಸ್ಪತ್ರೆ, ಟಿ.ನರಸೀಪುರ ತಾಲ್ಲೂಕು ಆಸ್ಪತ್ರೆ, ಎಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆ, ಹುಣಸೂರು ತಾಲ್ಲೂಕು ಆಸ್ಪತ್ರೆ, ಕೆ.ಆರ್.ನಗರ ತಾಲ್ಲೂಕು ಆಸ್ಪತ್ರೆ, ನಂಜನಗೂಡು ತಾಲ್ಲೂಕು ಆಸ್ಪತ್ರೆ, ಪಿರಿಯಾ ಪಟ್ಟಣ ತಾಲ್ಲೂಕು ಆಸ್ಪತ್ರೆ, ರಂಗಸಮುದ್ರ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದೆ.

ಇಂದು ರಂಗ ಸಮುದ್ರ ಕೇಂದ್ರದಲ್ಲಿ 60 ಮಂದಿ , ಇತರೆ ಕೇಂದ್ರಗಳಲ್ಲಿ ತಲಾ 100 ಜನರಿಗೆ ಲಸಿಕೆ ನೀಡಲಾಯಿತು. ಲಸಿಕೆ ಪಡೆದವರನ್ನು ನಿಗಾ ಘಟಕದ ಕೊಠಡಿಯಲ್ಲಿ ಅರ್ಧ ಗಂಟೆ ಪರಿಶೀಲನೆಗೆ ಕುಳ್ಳಿರಿಸಿ ನಂತರ ಕಳುಹಿಸಲಾಯಿತು. ಪ್ರಧಾನಿ ಮೋದಿ ಅವರು ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಂತೆ ನಗರದ ಪಿಕೆಟಿಬಿ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ದೇಹಗಳನ್ನು ಸಾಗಿಸುವ ಸಂತೋಷ್ ಎಂಬುವರಿಗೆ ಮೊದಲ ಲಸಿಕೆ ಹಾಕುವ ಮೂಲಕ ನಗರದಲ್ಲಿ ಚಾಲನೆ ಕೊಡಲಾಯಿತು.

ಮೈಸೂರಿನಲ್ಲಿ ಡಾ.ಚಂದ್ರಿಕಾ ಅವರ ನೇತೃತ್ವದಲ್ಲಿ ಇಂದಿನ ಲಸಿಕಾ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ , ನೋಡಲ್ ಅಧಿಕಾರಿ ರವಿ ಮತ್ತಿತರರು ಹಾಜರಿದ್ದರು. ಮೈಸೂರಿಗೆ 20500 ಕೋವಿಶೀಲ್ಡ್ ಲಸಿಕೆಗಳು ಬಂದಿವೆ. ಒಟ್ಟು ಜಿಲ್ಲೆಯಾದ್ಯಂತ 293 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

Facebook Comments