ಮೈಸೂರಿನಲ್ಲಿ ಶೇ. 100 ಲಸಿಕೆ ಹಾಕುವ ಗುರಿ:  ಸಚಿವ ಸೋಮಶೇಖರ್ 

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂನ್ 10: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವೀಡಿಯೋ ಸಂವಾದದಲ್ಲಿ ಮೈಸೂರಿಗೆ ಹೆಚ್ಚು ಲಸಿಕೆ ಪೂರೈಸಲು ಕೋರಿದರು.

ಮೈಸೂರು ಜಿಲ್ಲೆಯಲ್ಲಿ ಈಗ ಶೇ. 72 ರಷ್ಟು ಲಸಿಕಾಕರಣ ಆಗಿದೆ. 45 ವರ್ಷ ಮೇಲ್ಪಟ್ಟವರಿಗೆ ಶೇ. 100 ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸಾಕಾಗುವಷ್ಟು ಡೋಸ್ ಲಸಿಕೆ ಒದಗಿಸಬೇಕು ಎಂದು ಕೇಳಿದರು.

ಜಿಲ್ಲೆಯಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದೇವೆ. ಟೆಸ್ಟ್ ಸಂಖ್ಯೆಯನ್ನು ಸಹ ಹೆಚ್ಚಿಸಿದ್ದೇವೆ. ಇದರಿಂದ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡು ಬಂದರೂ ಸಹ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ ಎಂದರು.

ಮನೆ ಮನೆ ಸಮೀಕ್ಷೆಯನ್ನು ಈಗ ಬಹುತೇಕ ಮುಗಿಸಿದ್ದೇವೆ. ಇನ್ನೊಂದು ಸುತ್ತು ಮಾಡಲು ಆಲೋಚಿಸಲಾಗುತ್ತಿದೆ. ಈ ವಾರದಲ್ಲಿ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗುವ ನಿರೀಕ್ಷೆ ಇದೆ ಎಂದರು.

ಸೋಂಕಿನ ಲಕ್ಷಣ ಇಲ್ಲದಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗುತ್ತಿದೆ, ಇದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 88 ಬ್ಲಾಕ್ ಫಂಗಸ್‌ಗೆ ಪ್ರಕರಣಗಳಿವೆ. ಈ ಪೈಕಿ 62 ಸಕ್ರಿಯ ಪ್ರಕರಣಗಳಿವೆ. 10 ಸಾವು ಉಂಟಾಗಿದೆ. ಉಳಿದವರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.

ಮುಖ್ಯಮಂತ್ರಿಗಳ ವೀಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಎ.ಎಂ.ಯೋಗೀಶ್, ಪೋಲೀಸ್ ಆಯುಕ್ತ ಡಾ. ಚಂದ್ರಗುಪ್ತ, ‌ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್, ಎಂ.ಎಂ.ಸಿ.ಆರ್.ಐ. ಡೀನ್, ಡಾ. ನಂಜರಾಜ್, ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಅಮರನಾಥ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ. ನಾಗರಾಜು, ಮತ್ತಿತರರು ಉಪಸ್ಥಿತರಿದ್ದರು.

Facebook Comments